ಬೆಂಗಳೂರು: ಕರ್ನಾಟಕದಲ್ಲೂ ಬ್ರಿಟನ್ ಮೂಲದ ವೈರಸ್ ಹರಡುತ್ತಿದ್ದು, ಈ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಕೆಲ ಜನರಲ್ಲಿ ರೂಪಾಂತರಿ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಈ ಸೋಂಕು ಅಧಿಕ ಜನರಿಗೆ ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸೂಕ್ತ ಕ್ರಮವಹಿಸುತ್ತಿದೆ ಎಂದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ಇಂಗ್ಲೆಂಡ್‍ನಿಂದ ಆಗಮಿಸಿರುವವರು ತಪಾಸಣೆಗೆ ಒಳಗಾಗುವುದು ಉತ್ತಮ ಎಮದು ಅವರು ಹೇಳಿ, ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ರಾಜ್ಯದ ಜನರ ಸುರಕ್ಷತೆಗೆ ಸಹಕರಿಸಿ ಎಂದು ಸಿಎಂ ಮನವಿ ಮಾಡಿದರು.
ಕೊರೊನಾ ಅನ್‍ಲಾಕ್ ಪ್ರಕ್ರಿಯೆಗೆ ಈಗಿರುವ ಮಾರ್ಗಸೂಚಿಯೇ ಮುಂದುವರೆಯಲಿದೆ. ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕರ್ನಾಟಕದಲ್ಲೂ ರೂಪಾಂತರಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮೂರು ಮತ್ತು ಶಿವಮೊಗ್ಗದಲ್ಲಿ 4 ಮಂದಿಯಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಕಳೆದ ವಾರ ಇಂಗ್ಲೆಂಡ್ ನಿಂದ ವಿಮಾನದಲ್ಲಿ ಆಗಮಿಸಿದವರಾಗಿದ್ದಾರೆ.

