ಚಿಕ್ಕಬಳ್ಳಾಪುರ: ಗ್ರಾಮೀಣ ಜನತೆ ತೋರಿಸಿರುವ ಈ ಐತಿಹಾಸಕ ಬೆಂಬಲ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ರಾಜಕೀಯ ಬದುಕನ್ನು ಮುಡಿಪಾಗಿಡುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಘೋಷಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪರಾಜಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಈ ಹಿಂದೆಂದೂ ಈ ಪ್ರಮಾಣದಲ್ಲಿ ಗ್ರಾಮೀಣರ ಬೆಂಬಲ ವ್ಯಕ್ತವಾದ ನಿದರ್ಶನವಿಲ್ಲ. ಹೆಚ್ಚೆಂದರೆ ಹನ್ನೇರಡರಿಂದ ಹದಿನಾಲ್ಕು ಪಂಚಾಯಿತಿಗಳಲ್ಲಿ ಅಧಿಕಾರವನ್ನು ಹಿಡಿಯಲು ಸಾಧ್ಯವಾಗಿತ್ತು. ಆದರೆ ಎಲ್ಲಾ ಇಪ್ಪತ್ತೊಂಬತ್ತು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಅಧಿಕಾರಿ ಹಿಡಿಯುತ್ತಿರುವುದು ದಾಖಲೆ ಎಂದರು.
ಅಭೂತಪೂರ್ವ ಬೆಂಬಲ ನೀಡಿರುವ ಜನರಿಂದ ನಿರೀಕ್ಷೆಯೂ ಹೆಚ್ಚಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ನಿಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ನಿಮ್ಮ ಸುತ್ತ ದಲ್ಲಾಳಿಗಳು ಸುತ್ತಿಕೊಳ್ಳದಂತೆ, ಜಾತ್ಯಾತೀತ ನೆಲೆಗಟ್ಟಿನಲ್ಲಿ ಗ್ರಾಮದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಪಕ್ಷದ ಮುಖಂಡರಾದ ಕೃಷ್ಣಮೂರ್ತಿ, ನಾಗರಾಜು, ನವೀನ್ ಕಿರಣ್, ಮಿಲ್ಟನ್ ವೆಂಕಟೇಶ್, ರಂಗಪ್ಪ, ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಹಾವಲಕೊಂಡ ರಾಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

