ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ನನ್ನುಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಮೋದಿಯವರು, 450 ಕಿ.ಮೀ ಉದ್ದದ ನೈಸರ್ಗಿಕ ಪೈಪ್‍ಲೈನ್ ಅನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡುತ್ತಿರುವುದು ಗೌರವದ ವಿಚಾರ. ಇದು ಭಾರತಕ್ಕೆ, ವಿಶೇಷವಾಗಿ ಕರ್ನಾಟಕ ಮತ್ತು ಕೇರಳದ ಜನರಿಗೆ ಮಹತ್ವದ ದಿನ ಎಂದು ಹೇಳಿದ್ದಾರೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತವು ಅಭಿವೃದ್ಧಿಯಲ್ಲಿ ತನ್ನ ವೇಗ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ಮೋದಿ ತಿಳಿಸಿದರು.
2009ರಲ್ಲೇ ಇದರ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸುಮಾರು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 450 ಕಿ.ಮೀ ಉದ್ದದ ಪೈಪ್ ಲೈನ್ ಇದಾಗಿದ್ದು, ದಿನಕ್ಕೆ 12 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಗೈಲ್ ಇಂಡಿಯಾ ಈ ಅನಿಲ ಪೂರೈಕೆ ಪೈಪ್ ಲೈನ್ ಅನ್ನು ನಿರ್ಮಿಸಿದೆ.
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಪಿಣರಾಯಿ ವಿಜಯನ್, ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಲೋಕಾರ್ಪಣೆಗೊಳಿಸಿದ ಮೋದಿ

