ಮೈಸೂರು: ಯಾವುದು ಕಮಿಷನ್ ಸರ್ಕಾರ ಎಂಬುದು ನನಗೂ ಗೊತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿಯದ್ದು ಕಮಿಷನ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್ ಅವರು, ನಾನು ಸಹ ಹಿಂದಿನ ಸರ್ಕಾರದಲ್ಲಿದ್ದೆ. ಅಲ್ಲಿ ಯಾವ ರೀತಿ ನಡೆಯುತ್ತಿತ್ತು ಎಂಬುದು ನನಗೂ ಗೊತ್ತಿದೆ. ಇವರು ಇಂಥ ಹೇಳಿಕೆಯನ್ನು ಇಲ್ಲಿಗೇ ನಿಲ್ಲಿಸಲಿ. ಇಲ್ಲವಾದರೆ ನಾನು ಎಲ್ಲವನ್ನೂ ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಷ್ಟು ದಿನ ನಿದ್ರಾವಸ್ಥೆಯಲ್ಲಿದ್ದ ಕಾಂಗ್ರೆಸ್ ಪಕ್ಷ ಈಗ ಎದ್ದಿದೆ. ಸರ್ಕಾರದ ಬಗ್ಗೆ ಹಾಗೂ ಹೋರಾಟಗಳ ಬಗ್ಗೆ ಮಾತನಾಡುತ್ತಿದೆ. ಲಾಕ್ ಡೌನ್ ವೇಳೆ ಸಹಜವಾಗಿ ಆರ್ಥಿಕ ಚಟುವಟಿಕೆ ಕುಂಟಿತವಾಗಿರಬಹುದು. ಆದರೆ, ಈಗ ಪುನಃ ವೇಗವನ್ನು ಪಡೆದುಕೊಂಡಿದೆ. ಎಂದು ಸೋಮಶೇಖರ್ ಹೇಳಿದರು.
ಸುಮಾರು ಸಾವಿರದಷ್ಟು ಸಹಕಾರ ಸಂಘಗಳು ಕೊರೊನಾ ಸಮಯದಲ್ಲಿ ನಿಷ್ಕ್ರಿಯವಾಗಿದ್ದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಹಕಾರ ಸಂಘಗಳ ನಿಷ್ಕ್ರಿಯತೆಗೆ ಕೊರೊನಾ ಒಂದೇ ಕಾರಣವಲ್ಲ. ಕಳೆದೊಂದು ವರ್ಷದಿಂದ ಬೇರೆ ಬೇರೆ ಕಾರಣಗಳಿಗೆ ಅವುಗಳು ನಿಷ್ಕ್ರಿಯಗೊಂಡಿವೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

