ಯಾವುದಕ್ಕೂ ನಾನು ಹೆದರುವುದಿಲ್ಲ -ಸಿಎಂ ಬಿಎಸ್‍ವೈ

ದಾವಣಗೆರೆ: ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ಸಿ.ಡಿ. ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ಹರಿಹರದಲ್ಲಿನ ಹರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಿಎಂ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಂಪುಟ ವಿಸ್ತರಣೆ ನಂತರ ಕೆಲವರು ಸಿಡಿ ವಿಚಾರ ಹರಿಬಿಟ್ಟಿರುವ ಬಗ್ಗೆ ಸಿಎಂ ಪ್ರಸ್ತಾಪಿಸಿ, ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಕೇಂದ್ರ ನಾಯಕರ ಸೂಚನೆಯಂತೆ ಸಂಪುಟ ವಿಸ್ತರಣೆ ಮಾಡಿದ್ದೇನೆ. ಕೇಂದ್ರ ನಾಯಕರ ಆಶೀರ್ವಾದ ಇರುವವರೆಗೂ ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಕೇಂದ್ರದ ನಾಯಕರು ಹೇಳಿದಂತೆ ಎರಡೂವರೆ ವರ್ಷ ಉತ್ತಮ ಆಡಳಿತ ನೀಡುತ್ತೇನೆ. ಯಾರು ಏನೂ ಬೇಕಾದರೂ ಮಾತನಾಡಿಕೊಳ್ಳಲಿ, ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದರು.
ಕೇಂದ್ರ ನಾಯಕರ ಅಪೇಕ್ಷಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಿದ್ದೇನೆ. ನನ್ನ ಇತಿ ಮಿತಿಯೊಳಗೆ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇನೆಂದರು.
ಮಂತ್ರಿ ಮಾಡಿಲ್ಲ ಎಂದು ಆರೋಪ ಮಾಡಿರುವವರು ಕೇಂದ್ರ ನಾಯಕರಿಗೆ ದೂರು ಕೊಡಲಿ. ಯಾರೂ ಅಡ್ಡಿ ಮಾಡಲ್ಲ ಎಂದರು.
ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವವರು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.