ಹೈದರಾಬಾದ್: ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರ ಪ್ರಿಯರಿಗೆ ಭರ್ಜರಿ ಸುದ್ದಿ.
ಕೆಜಿಎಫ್ ಚಿತ್ರ ನಿರ್ದೇಶಿಸಿ ಮೊದಲ ಟೀಸರ್‍ನಿಂದಲೇ ವಿಶ್ವದ ಎಲ್ಲ ದಾಖಲೆಯನ್ನು ಬ್ರೇಕ್ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರಕ್ಕೆ ಹೈದರಾಬಾದ್ ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸುತ್ತಿರುವ, ಕೆಜಿಎಫ್ ಚಿತ್ರದಂಥ ಬಿಗ್ ಬಜೆಟ್ ಇಂಡಿಯನ್ ಸಿನಿಮಾವನ್ನು ನಿರ್ಮಾಣ ಮಾಡಿದ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‍ನ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ ಚಿತ್ರ ಸಲಾರ್.
ಸಲಾರ್ ಚಿತ್ರ ತಂಡದ ಸಂಭ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು.
ಮುಹೂರ್ತದ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ, ಕನ್ನಡದಲ್ಲಿ ತಮ್ಮ
ಕೆಜಿಎಫ್ ಯಶಸ್ವಿ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಅವರ ಈ ಚಿತ್ರ ಮಾಡುತ್ತಿರುವ ಮೂಲಕ ಭಾಷೆ, ಗಡಿ ಮೀರಿ ಕನ್ನಡ-ತೆಲುಗು ಚಿತ್ರರಂಗ ಒಂದಾಗಿ ಮುಂದೆ ಹೋಗುತ್ತಿರುವುದಕ್ಕೆ ಆನಂದವಾಗಿದೆ ಎಂದು ತಿಳಿಸಿದರು.
ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ಡಿಸಿಎಂ, ಬಾಹುಬಲಿ ಚಿತ್ರದಿಂದ ಕನ್ನಡ ಸಿನಿ ಪ್ರಿಯರ ಮನಗೆದ್ದಿರುವ ಪ್ರಭಾಸ್ ಸಲಾರ್ ಚಿತ್ರದಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆಂದರು.
ನಾನು ಬಾಹುಬಲಿ ಚಿತ್ರವನ್ನು ನೋಡಿ ಪ್ರಭಾಸ್ ಅವರಿಗೆ ಫಿದಾ ಆಗಿದ್ದೆ. ಈಗ ಅವರ ಜತೆಯಲ್ಲೇ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಈ ಮೂಲಕ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಲಾರ್ ಚಿತ್ರ ತಯಾರು ಮಾಡುತ್ತಿದ್ದೇವೆ. ನಮ್ಮ ಕೆಜಿಎಫ್ ಚಿತ್ರವನ್ನು ಡೈರೈಕ್ಟ್ ಮಾಡಿರುವ ಪ್ರಶಾಂತ್ ನೀಲ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂದರು ನಿರ್ಮಾಪಕ ವಿಜಯ್ ಕಿರಗಂದೂರು.
ಸಲಾರ್ ಚಿತ್ರಕ್ಕೆ ಪ್ರಭಾಸ್ ಅವರ ಹೊರತಾಗಿ ನಾಯಕ ನಟಿ, ಇನ್ನಿತರೆ ತಾರಾಬಳಗ ಆಯ್ಕೆಯಾಗಿಲ್ಲ.
ಚಿತ್ರವನ್ನು ಅನೌನ್ಸ್ ಮಾಡಿದಾಗ ಹೊರಬಿದ್ದ ಸಲಾರ್ ಫಸ್ಟ್‍ಲುಕ್ ದೇಶದೆಲ್ಲೆಡೆ ವೈರಲ್ ಆಗಿತ್ತು.
ನಟ ಯಶ್, ರವಿ ಬಸ್ರೂರ್, ಭುವನ್ ಗೌಡ ಸೇರಿದಂತೆ ಕೆಜಿಎಫ್ ಚಿತ್ರತಂಡದ ಅನೇಕರು ಪಾಲ್ಗೊಂಡಿದ್ದರು.
ಅದರಲ್ಲೂ ಯಶ್ ಪ್ರಮುಖ ಆಕರ್ಷಣೆಯಾಗಿದ್ದರು.
ಪ್ರಭಾಸ್ ಅವರು ನಟಿಸುತ್ತಿರುವ ಸಲಾರ್ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಕ್ರೇಜ್ ಸೃಷ್ಟಿ ಮಾಡಿದೆ.
ಚಿತ್ರದ ಹೀರೋ ಪ್ರಭಾಸ್, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಅನೇಕ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.

