ಬೆಂಗಳೂರು: ನಮ್ಮ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಅಧಿಕ ಪ್ರಸಂಗತನದ ಹೇಳಿಕೆ ಖಂಡನೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ. ಬೆಳಗಾವಿ ನಮ್ಮದು. ಎಂದು ಸಿದ್ದರಾಮಯ್ಯ ಟ್ವಿಟ್ ನಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ. ಉದ್ಧವ್ ಠಾಕ್ರೆ ಅವರೇ, ಇತ್ಯರ್ಥವಾಗಿರುವ ವಿಷಯವನ್ನು ಕೆಣಕಿ ರಾಜಕೀಯ ಮಾಡಲು ಹೋಗಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ಅವರೇ, ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಅವರು ತಿಳಿಸಿದರು.
ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆಗೆ ಸಿಎಂ ಬಿ.ಎಸ್.ವೈ ಅವರು, ಅಧಿಕೃತವಾಗಿ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸಿದ್ದರಾಮಯ್ಯನವರು ಟ್ವೀಟ್ ನಲ್ಲಿ ಹೇಳಿದ್ದಾರೆ.

