ಹುಬ್ಬಳ್ಳಿ: ಕೋವಿಡ್ ವ್ಯಾಕ್ಸಿನ್ ಪ್ರಯೋಗ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಹೇಳಿದರು.
ನಗರದಲ್ಲಿ ಮಂಗಳವಾರ ಡಾ. ಸುಧಾಕರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದ ಪ್ರತಿ ಜಿಲ್ಲೆಗಳಿಗೆ ತೆರಳಿ ವ್ಯಾಕ್ಸಿನ್ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲರೂ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಕೆಲಕಡೆಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಲು ಜನರು ಹಿಂದೆಟು ಹಾಕುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಲಸಿಕೆಯನ್ನು ಜನರು ನಿನ್ನೆ ತೆಗೆದುಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಇರುವುದು ಸಹಜ. ಇದೀಗ ಎಲ್ಲ ಕಡೆ ಲಸಿಕೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಲಸಿಕೆ ನೀಡಿದ ಮಾಹಿತಿ ಬಂದ ನಂತರ ತಯಾರಿಕಾ ಸಾಮಥ್ರ್ಯವನ್ನು ಸಹ ಹೆಚ್ಚಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಲಸಿಕೆ ಪಡೆದ ವ್ಯಕ್ತಿಗೆ ಹೃದಯಾಘಾತವಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್ ಅವರು, ಹೃದಯಾಘಾತಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ಮರಣೋತ್ತರ ಪರೀಕ್ಷೆ ಬಂದಿದೆ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಬೇಕಿದೆ ಎಂದವರು ಹೇಳಿ, ಬಹಳ ಕಷ್ಟಪಟ್ಟು ನಮ್ಮ ವಿಜ್ಞಾನಿಗಳು ಕೋವಿಡ್ ಲಸಿಕೆಯನ್ನು ತಂದಿದ್ದಾರೆಂದರು.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಶಾಸಕರ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮರ್ಥರಿದ್ದಾರೆ. ಹೈ ಕಮಾಂಡ್ ಬಲಿಷ್ಠವಾಗಿದ್ದು, ಯಾರಿಗೆ ಮಂತ್ರಿ ಸ್ಥಾನ ಕೊಡಬೇಕು ಎನ್ನುವುದನ್ನು ವರಿಷ್ಠರು ಸರಿಯಾಗಿ ನಿರ್ಧರಿಸಿದ್ದಾರೆ. ಅವರಿಗೆ ಎಲ್ಲವನ್ನೂ ನಿಭಾಯಿಸುವ ಸಾಮಥ್ರ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ವ್ಯಾಕ್ಸಿನ್ ಪ್ರಯೋಗ ಯಶಸ್ವಿ -ಸಚಿವ ಡಾ. ಸುಧಾಕರ

