ಮರಾಠ ಪ್ರಾಧಿಕಾರ ರಚನೆ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರೇರಣೆ -ಡಿ.ಕೆ.ಶಿ

ಬೆಂಗಳೂರು: ರಾಜ್ಯ ಸರ್ಕಾರ ಅನಗತ್ಯವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನಿಸಿದ್ದೆ ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆ ಎಂದವರು ತಿಳಿಸಿದರು.
ರಾಜ್ಯದಲ್ಲಿನ ಮರಾಠಿಗರ ಅಭಿವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಮರಾಠ ಪ್ರಾಧಿಕಾರ ಅನಗತ್ಯವಾಗಿತ್ತು. ಇದರಿಂದ ಈ ವಿವಾದ ಎದ್ದಿದೆ ಎಂದು ಡಿಕೆಶಿ ಹೇಳಿದರು.
ರಾಜ್ಯಗಳ ವಿಂಗಡನೆಯಾಗುವಾಗ ತೆಗೆದುಕೊಂಡ ಗಡಿ ತೀರ್ಮಾನ ಈಗ ಮುಗಿದ ಅಧ್ಯಾಯ. ಕರ್ನಾಟಕ ಭೂಪಟ ಸ್ಪಷ್ಟವಾಗಿದೆ. ನಮ್ಮ ಊರು, ಗ್ರಾಮಗಳೆಲ್ಲ ವಿಂಗಡಣೆ ಆಗಿವೆ ಎಂದರು.
ನಮ್ಮಿಂದ ಒಂದಿಂಚೂ ಅವರಿಗೆ ಹೋಗುವುದಿಲ್ಲ, ಅವರಿಂದಲೂ ಒಂದಿಂಚೂ ನಮಗೆ ಬರುವುದಿಲ್ಲ ಎಂದವರು ಹೇಳಿದರು.
ಗೊಂದಲ ಸೃಷ್ಟಿಸಲು, ರಾಜಕೀಯ ಉದ್ದೇಶದಿಂದ ಠಾಕ್ರೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆಎಂದರು ಡಿಕೆಶಿ.
ಸಚಿವ ಯೋಗೇಶ್ವರ್ ವಿರುದ್ಧ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರಿಸಿ ಈ ವಿಚಾರದಲ್ಲಿ ಅವರು ಮಾಹಿತಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ನನಗೂ ಕೆಲವು ವಿಚಾರಗಳು ಗೊತ್ತಿವೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತಿ, ಜನರಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಡಿಕೆಶಿ ಟೀಕಿಸಿದರು.