ಡಾ. ಗುರುಪ್ರಸಾದ ಎಚ್ .ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಇಂದು ಜನವರಿ 26ನೇ ತಾರೀಕಿನಂದು ಭಾರತ ದೇಶ 72ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ.
ಭಾರತೀಯ ಕಲೆ, ಸಂಸ್ಕೃತಿ, ಶಕ್ತಿ, ಸಾಮರ್ಥ್ಯಗಳೆಲ್ಲಾ ದೆಹಲಿಯ ರಾಜಪಥದಲ್ಲಿ ಮೆರವಣಿಗೆ ಮೂಲಕ ಇಡೀ ವಿಶ್ವವನ್ನೇ ಗಮನಸೆಳೆಯುತ್ತಿದೆ.
ಈ ಸಂದರ್ಭದಲ್ಲಿ ನಮ್ಮ ದೇಶದ ಮೊದಲ ಗಣರಾಜ್ಯೋತ್ಸವದ ಆಚರಣೆ ಹೇಗೆ ನಡೆಯಿತು ಎಂಬುದನ್ನು ತಿಳಿಯೋಣ.
ದೇಶಕ್ಕೆ ಸ್ವತಂತ್ರ ಬಂದ ಮೊದಲ ಮೂರು ವರ್ಷ ಬಾಬಾ ಸಾಹೇಬ್ ಅಂಬೇಡ್ಕರ್ ರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯು 26 ನವೆಂಬರ್ 1949ರಲ್ಲಿ ಸಲ್ಲಿಸಿದ ಸಂವಿಧಾನವನ್ನು ಅಳವಡಿಸಿಕೊಂಡಿತ್ತು.
ಆದರೆ 1950 ಜನವರಿ 26ನೇ ತಾರೀಕು ಸಂವಿಧಾನ ಅಧಿಕೃತವಾಗಿ ಜಾರಿಗೆ ಬರುವ ಮೂಲಕ ಭಾರತ ಮೊದಲ ಗಣರಾಜ್ಯೋತ್ಸವವನ್ನ ಆಚರಿಸಲಾಯಿತು.
ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮವನ್ನು ದೆಹಲಿಯ ಪ್ರಸಿದ್ಧ ಇರ್ವಿನ್ ಆಂಫಿಥಿಯೇಟರ್ ನಲ್ಲಿ ಆಚರಿಸಲಾಗಿತ್ತು. ಅಂದು ದೇಶದ ವಿದೇಶಗಳ ಗಣ್ಯರು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ದೇಶದ ಅಂದಿನ ಅಧ್ಯಕ್ಷರಾಗಿದ್ದ ಸುಕರ್ಣೋ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಭಾರತದ ಮೊದಲ ರಾಷ್ಟ್ರಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು, ಇಂಡೋನೇಷ್ಯಾ ಅಧ್ಯಕ್ಷರನ್ನ ತಮ್ಮದೇ ಕುದುರೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತಂದಿದ್ದು ವಿಶೇಷವಾಗಿತ್ತು.
ಇನ್ನು ಗಣರಾಜ್ಯೋತ್ಸವ ಆಚರಣೆಗೂ ಮುನ್ನ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರು ಅವರು ಆಲ್ ಇಂಡಿಯಾ ರೇಡಿಯೋ ಮೂಲಕ ಭಾರತೀಯರನ್ನ ಕುರಿತು ಭಾಷಣ ಮಾಡಿದ್ದರು.
ದೆಹಲಿಯಲ್ಲಿ ಪರೇಡ್ ಕೂಡ ನಡೆದಿತ್ತು. ಇದೆಲ್ಲಾ ನಡೆದಿದ್ದು ದೆಹಲಿಯ ಇರ್ವಿನ್ ಆಂಫಿಥಿಯೇಟರ್ ನ ಮುಂದೆ, ನಂತರ ಇದೇ ಸ್ಥಳ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂ ಆಗಿ ಬದಲಾಯಿತು.
ಅಂದಿನ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಗ ತಾನೆ ಭಾರತೀಯ ಸೇನೆ ಆಪರೇಷನ್ ಜಮ್ಮು ಕಾಶ್ಮೀರ ಕಾರ್ಯಾಚರಣೆಯನ್ನ ಯಶಸ್ವಿಯಾಗಿ ಮುಗಿಸಿತ್ತು. ಹೀಗಾಗಿ ಈ ಆಪರೇಷನ್ ನಲ್ಲಿ ಭಾಗವಹಿಸಿ ಶೌರ್ಯ ಮೆರೆದ ನಾಲ್ಕು ವೀರ ಯೋಧರಾದ ಮೇಜರ್ ಸೋಮನಾಥ್ ಶರ್ಮಾ ಅವರು ಮೊಟ್ಟ ಮೊದಲ ಪರಮವೀರ ಚಕ್ರ ಪಡೆದ ಸೇನಾನಿ ಎನಿಸಿದರು. ನಾಯಕ್ ಜಾಧೂನಾಥ್ ಸಿಂಗ್ ಅವರಿಗೆ ಮರಣೋತ್ತರ ಪರಮವೀರ ಚಕ್ರವನ್ನ ಪ್ರದಾನ ಮಾಡಲಾಯಿತು. ಕ್ಯಾಪ್ಟನ್ ರಾಮ್ ರಾಘೋಬಾ ರಾಣೆ ಹಾಗೂ ಹವಾಲ್ದಾರ್ ಕರಮ್ ಸಿಂಗ್ ಅವರಿಗೂ ಪರಮವೀರ ಚಕ್ರವನ್ನ ನೀಡಿ ಸನ್ಮಾನಿಸಲಾಯಿತು
ಅದೇ ದಿನದಂದು ಭಾರತೀಯ ವಾಯುಸೇನೆಯ 100ಕ್ಕೂ ಹೆಚ್ಚು ಯುದ್ಧ ವಿಮಾನಗಳು ದೆಹಲಿಯ ಬಾನಂಗಳದಲ್ಲಿ ಹಾರಾಡುವ ಮೂಲಕ ಚಿತ್ತಾರ ಬಿಡಿಸಿದ್ದವು.
ಯುದ್ಧ ವಿಮಾನಗಳಲ್ಲಿ ವಾಯುಸೇನೆಯ ದಂತಕಥೆ ಎನಿಸಿಕೊಂಡಿರುವ ಹಾರ್ವರ್ಡ್, ಡಕೋಟಾ, ಲಿಬರೇಟರ್ಸ್, ಟೆಂಪೆಸ್ಟ್, ಸ್ಪಿಟ್‍ಫೈರ್ ವಿಮಾನಗಳೆಲ್ಲಾ ಹಾರಾಟ ನಡೆಸಿದ್ದವು.
1950 ಜನವರಿ 26ನೇ ತಾರೀಕಿನಂದೇ ಬ್ರಿಟೀಷರು ಇಟ್ಟಿದ್ದ ರಾಯಲ್ ಫೆÇೀರ್ಸ್ ಎನ್ನುವ ಹೆಸರನ್ನ ಬದಲಿಸಿ ಭಾರತೀಯ ವಾಯುಸೇನೆ ಎಂದು ಮರು ನಾಮಕರಣ ಮಾಡಲಾಯಿತು.

