ಪ್ರೊ. ಭಗವಾನ್ ಗೆ ಮಸಿ ಬಳಿದ ವಕೀಲೆ

ಬೆಂಗಳೂರು: ವಕೀಲೆಯೊಬ್ಬರು ಪ್ರೊ. ಕೆ. ಎಸ್. ಭಗವಾನ್ ಗೆ ಮಸಿ ಬಳಿದಿರುವ ಘಟನೆ ಕೋರ್ಟ್ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಮೀರಾ ರಾಘವೇಂದ್ರ ಎಂಬ ವಕೀಲೆ ಪ್ರೊ. ಭಗವಾನ್ ಗೆ ಮಸಿ ಬಳಿದಿದ್ದಾರೆ.
ಶ್ರೀ ರಾಮ ಸೇರಿದಂತೆ ಹಲವು ಹಿಂದೂ ದೇವರ ಬಗ್ಗೆ ಅವಹೇಳಿನಕಾರಿ ಹೇಳಿಕೆ ನೀಡುತ್ತಾರೆಂದು ಆರೋಪಿಸಿ ವಕೀಲೆ ಭಗನಾನ್ ಮುಖಕ್ಕೆ ಮಸಿ ಬಳಿದರು.
ಹಿಂದೂ ಧರ್ಮವನ್ನು ಹೀಯಾಳಿಸುತ್ತಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ ಎಂದು ವಕೀಲೆ ಮೀರಾ ರಾಘವೇಂದ್ರ ಅವರು ಖಾಸಗಿ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಭಗವಾನ್ ಅವರು ಗುರುವಾರ ಬೆಂಗಳೂರಿನ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದರು.
ವಿಚಾರಣೆ ನಂತರ ನ್ಯಾಯಾಲಯ ಪ್ರೊ. ಭಗವಾನ್ ಗೆ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಪಡೆದು ಭಗವಾನ್ ನ್ಯಾಯಲಯದಿಂದ ಹೊರ ಬರುತ್ತಿದ್ದಂತೆ ವಕೀಲೆ ಪ್ರೊ. ಭಗವಾನ್ ಗೆ ಮಸಿ ಬಳಿದರು.
ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ಭಗವಾನ್ ಅವರು ವಕೀಲೆ ವಿರುದ್ಧ ದೂರು ನೀಡಿದ್ದಾರೆ.