ಬಿಜೆಪಿ ಮುಕ್ತ ಕರ್ನಾಟಕ ಮಾಡುವುದೇ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರ ಗುರಿ -ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದು, ಬಿಜೆಪಿ ಮುಕ್ತ ಕರ್ನಾಟಕ ಮಾಡುವುದೇ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಸದಾಶಿವನಗರದ ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಕೆಶಿ ಮಾತನಾಡಿದರು.
ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರು, ಸೋತವರು, ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರೂ ನಮ್ಮ ಹುಡುಗರೇ. ಎಲ್ಲರೂ ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿಯಲಿದ್ದಾರೆಂದು ಅವರು ತಿಳಿಸಿದರು.
ಪಕ್ಷದಲ್ಲಿ ಆಂತರಿಕವಾಗಿ ಚುನಾವಣೆ ನಡೆದಿದೆ. ಅದರ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಗೆಲುವು, ಸೋಲು ನನಗೆ ಮುಖ್ಯ ಅಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ತಮ್ಮ ಹೋರಾಟದ ಛಲ ತೋರಿರುವುದು ಬಹಳ ಮುಖ್ಯ. ಗೆದ್ದವರು ಹಾಗೂ ಸೋತವರನ್ನು ಸಮಾನಾಗಿ ತೆಗೆದುಕೊಂಡು ಹೋಗುವ ಕೆಲಸ ನಾನು ಮಾಡುತ್ತೇನೆ ಎಂದರು.
ಹೈಕಮಾಂಡ್ ಯಾರನ್ನು ನೇಮಕ ಮಾಡುತ್ತದೆಯೋ ಅವರ ಜತೆಗೂ ಕೆಲಸ ಮಾಡುತ್ತೇನೆ. ಯಾರು ನೇಮಕ ಆಗುವುದಿಲ್ಲವೋ ಅವರನ್ನೂ ಸೇರಿಸಿಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕುರುಬ ಹಾಗೂ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ವಿಚಾರದಲ್ಲಿ ನನಗೆ ಆಘಾತ ಎನಿಸಿದ್ದು, ಸಚಿವರೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ಬಳಿಯೇ ಅಧಿಕಾರ ಇದೆ. ಅವರ ಕೈಯಲ್ಲಿ ಪೆನ್ನು, ಪೇಪರ್ ಇದೆ. ಆದರೂ ಅವರು ಬೀದಿಗೆ ಯಾಕೆ ಇಳಿದಿದ್ದಾರೋ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.
ಸ್ವಾಮೀಜಿಗಳು ಹೋರಾಟ ಮಾಡುವುದರಲ್ಲಿ ಒಂದು ಅರ್ಥ ಇದೆ. ಅವರಿಗೆ ಧ್ಯೇಯ, ಉದ್ದೇಶ ಇರುತ್ತದೆ. ಆದರೆ ಮಂತ್ರಿಗಳು ಹೋರಾಟ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸರ್ಕಾರ ಮಾತನಾಡಬೇಕು. ನಾನು ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡುವ ಮುನ್ನ ಪಕ್ಷದ ಒಳಗೆ ಚರ್ಚೆ ಮಾಡಬೇಕು. ಇದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರ ಅಲ್ಲ ಎಂದರು.
ವಿಧಾನ ಪರಿಷತ್ತಿನ ಸಭಾಪತಿ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ನಜೀರ್ ಅಹ್ಮದ್ ಅವರನ್ನು ಕಣಕ್ಕಿಳಿಸುತ್ತೇವೆ ಎಂದು ಡಿಕೆಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉತ್ತರಾಖಂಡದಲ್ಲಿ ಹಿಮಪಾತದಿಂದ 150ಕ್ಕೂ ಹೆಚ್ಚು ಜನ ಕಾಣೆಯಾಗಿರುವುದು ದುರಾದೃಷ್ಟಕರ ಘಟನೆ ಎಂದು ಹೇಳಿದರು.