ಡಕೋಟದಲ್ಲಿ ವಿರೋಧ ಪಕ್ಷದವರೇ ಇದ್ದಾರೆ -ಸಚಿವ ಎಸ್.ಟಿ.ಎಸ್

ಮೈಸೂರು: ಡಕೋಟದಲ್ಲಿ ವಿರೋಧ ಪಕ್ಷದವರೇ ಇದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಸೋಮವಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುವುದು ವಿರೋಧ ಪಕ್ಷದವರ ಕೆಲಸವಾಗಿದೆ. ಅದಲ್ಲದೇ ವಿರೋಧ ಪಕ್ಷದವರು ಜನಪ್ರಿಯ ಸರ್ಕಾರ ಎಂದು ಹೇಳುತ್ತಾರೆಯೇ? ಅವರೇ ಡಕೋಟಾದಲ್ಲಿದ್ದಾರೆ. ಸುಮ್ಮನೆ ನಮ್ಮ ಬಗ್ಗೆ ಹೇಳುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಎಸ್. ಹೇಳಿದರು.
ವಿರೋಧ ಪಕ್ಷದಲ್ಲಿರುವ ಅವರೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷದವರಾಗಿ ಅವರೇ ಜಿಲ್ಲೆಗಳಿಗೆ ಪ್ರವಾಸಕ್ಕೂ ಹೋಗುತ್ತಿಲ್ಲ. ಅವರು ಪ್ರವಾಸಕ್ಕೆ ಸರ್ಕಾರವೇ ಹಣ ನೀಡುತ್ತದೆ. ಆದರೆ, ಅವರು ಮಾಡುವ ಕೆಲಸ ಮಾಡದೇ ಸುಮ್ಮನೆ ಈ ರೀತಿ ಹೇಳುತ್ತಾರೆ ಎಂದರು.
ವಿರೋಧ ಪಕ್ಷದ ನಾಯಕರು, ವಿರೋಧ ಪಕ್ಷಗಳ ಸದಸ್ಯರು ಮಾಡಿದ ಆರೋಪಕ್ಕೆ ನಾನೂ ಸಹಿತ ಎಲ್ಲರೂ ಮಾತನಾಡಿದ್ದೇವೆ. ಸಮರ್ಥವಾಗಿ ಎದುರಿಸಿದ್ದೇವೆ. ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ತಿಳಿಸಿದ್ದೇವೆ. ಇನ್ನು ಮುಖ್ಯಮಂತ್ರಿಗಳು ಮಾತನಾಡಲು ನಿಂತಾಗ ನಾವು ಯಾರೂ ಮಾತನಾಡುವುದಿಲ್ಲ. ಅವರು ನಮ್ಮ ನಾಯಕರು. ಅವರು ಸದನದಲ್ಲಿ ಒಂದೂವರೆ ಗಂಟೆಗಳ ಕಾಲ ಮಾತನಾಡಿ ಸರ್ಕಾರದ ಎಲ್ಲ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಅವರೊಬ್ಬರನ್ನೇ ಏಕಾಂಗಿಯನ್ನಾಗಿ ಬಿಟ್ಟಿದ್ದೇವೆ ಎಂಬುದು ಸುಳ್ಳು ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮುಖ್ಯಮಂತ್ರಿಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆಂದರು.
ಯಾವ ರಾಜಕಾರಣಿಗಳು ಯಾರು ಬೇಲ್ ನಲ್ಲಿಲ್ಲ ಎಂದು ಪ್ರಶ್ನಿಸಿದ ಸಚಿವರು, ಕೆಲವು ವೈಯುಕ್ತಿಕ ವಿಷಯಗಳಲ್ಲೂ ಪ್ರಕರಣಗಳಿರುತ್ತವೆ. ಅದಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.