ರಾಯಚೂರು: ಕೇಂದ್ರ ಸರ್ಕಾರ ಕೃಷಿ ಮಸೂದೆ ಬಿಲ್ ಅನ್ನು ಅವಸರದಲ್ಲಿ ಪಾಸ್ ಮಾಡಬಾರದಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೇಳಿದರು.
ನಗರದಲ್ಲಿ ದೇವೇಗೌಡರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದೆಹಲಿಯಲ್ಲಿ ರೈತ ಹೋರಾಟದ ಟ್ರ್ಯಾಕ್ಟರ್ ಪರೇಡ್ ವಿಚಾರ ಬಗ್ಗೆ ಮಾತನಾಡಿದ ದೇವೇಗೌಡರು, ಕೇಂದ್ರ ಸರ್ಕಾರ ಅವಸರದಲ್ಲಿ ಬಿಲ್ ಪಾಸ್ ಮಾಡಬಾರದಿತ್ತು. ಕೃಷಿ ಮಸೂದೆಗೆ ಎರಡ್ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳಬಹುದಿತ್ತು ಎಂದರು.
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಪ್ರತಿಷ್ಠೆ ಆಗಬಾರದು. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ದೇವೇಗೌಡ ಹೇಳಿದರು.
ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಗೆ ಯಾರು ಕಾರಣ ಎಂಬುದು ತನಿಖೆ ನಡೆದಿದೆ. ಖಲಿಸ್ತಾನ, ವಿದೇಶಿ ಹಣ ಬಂದಿತ್ತು ಎನ್ನುವ ಊಹಾಪೆÇೀಹಕ್ಕೆ ನಾನು ಉತ್ತರ ಕೊಡುವುದಿಲ್ಲ. ಗೃಹ ಸಚಿವಾಲಯ ಈ ಬಗ್ಗೆ ತನಿಖೆ ಮಾಡುತ್ತಿದ್ದು, ಅದರ ವರದಿ ಆಧರಿಸಿ ನಂತರ ಮಾತನಾಡುತ್ತೇನೆ ಎಂದರು.
ನಾಲ್ಕು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಗೆ ಹೆಚ್ಚು ಸ್ಥಾನ ಸಿಗಲ್ಲ ಎಂಬ ಭಾವನೆಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತದ್ದು, ಮತಗಳು ಕಡಿಮೆ ಬಂದರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು ಎಂದರು.
ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆಯಾಗಬಹುದು. ಆದರೆ ಮೂರನೇ ಬಾರಿಯೂ ಮಮತಾ ಬ್ಯಾನರ್ಜಿ ಸಿಎಂ ಆಗಲಿದ್ದಾರೆ ಎಂದು ದೇವೇಗೌಡ ಅವರು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕುರಿತು ಕೇಳಲಾದ ಪ್ರಶ್ನೆಗೆ ದೇವೇಗೌಡರು ಉತ್ತರಿಸಿ, ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಉತ್ತಮ ಮಾಹಿತಿ ಇದೆ. ಅವರೇ ಮಾತನಾಡುತ್ತಾರೆಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯದ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂಧಗಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದ ಅವರು ನಮ್ಮ ಬಳಿ ಚುನಾವಣೆಗೆ ಹಣ ಇಲ್ಲ. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಹೇಳಿದರು.
2023ರಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದೆ. ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.
ಕೇಂದ್ರ ಸರ್ಕಾರ ಕೃಷಿ ಮಸೂದೆ ಬಿಲ್ ನ್ನು ಅವಸರದಲ್ಲಿ ಪಾಸ್ ಮಾಡಬಾರದಿತ್ತು -ಹೆಚ್.ಡಿ.ಡಿ.

