ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟಿಸಿದ ಸಿಎಂ

ಬೆಂಗಳೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಉದ್ಘಾಟಿಸಿದರು.
50 ವರ್ಷಗಳ ಹಳೆಯ ಕಟ್ಟಡ ಕೆಡವಿ 3.76 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಕಚೇರಿಯ ಆಡಳಿತದ ಕಾರ್ಯ ಚಟುವಟಿಕೆ ಇಲ್ಲಿ ನಡೆಯುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ರಾಜ್ಯ ಉಗ್ರಾಣ ಸಹಕಾರ ಇಲಾಖೆಯ ಅಧೀನ ಸಂಸ್ಥೆಯಾಗಿದೆ. ಇದರಲ್ಲಿ ರಾಜ್ಯದಷ್ಟೇ ಪಾಲನ್ನು ಕೇಂದ್ರ ಸಹ ಹೊಂದಿದೆ. ಇದನ್ನು ರೈತರ ಉಪಯೋಗಕ್ಕಾಗಿ ನಾವು ಸ್ಥಾಪನೆ ಮಾಡಿದ್ದು, ಇದರಿಂದ ಕೋಟ್ಯಂತರ ರೈತರಿಗೆ ಇದುವರೆಗೆ ಉಪಯೋಗವಾಗಿದೆ. ಕಡಿಮೆ ಬೆಲೆ ಇದ್ದಾಗ ರೈತರು ತಮ್ಮ ದಾಸ್ತಾನನ್ನು ನಮ್ಮ ರಾಜ್ಯದಲ್ಲಿರುವ ಸರ್ಕಾರದ ಅಧೀನದ ಗೋದಾಮುಗಳಲ್ಲಿ ಸಂಗ್ರಹ ಮಾಡಬಹುದಾಗಿದೆ ಎಂದು ಸಚಿವ ಎಸ್. ಟಿ. ಸೋಮಶೇಖರ್ ಅವರು ತಿಳಿಸಿದರು.
ಹೀಗೆ ದಾಸ್ತಾನು ಮಾಡಲಾದ ಸರಕಿಗೆ ಉಗ್ರಾಣಗಳಿಂದ ರಶೀದಿಗಳು ಲಭಿಸಲಿದ್ದು, ಇದರಿಂದ ಬ್ಯಾಂಕ್ ಗಳು ಸೇರಿದಂತೆ ಇತರ ಹಣಕಾಸಿನ ಸಂಸ್ಥೆಗಳಿಂದ ಸಾಲ ಸೌಲಭ್ಯಗಳು ಸಿಗಲಿವೆ ಎಂದು ತಿಳಿಸಿದರು.
ಕೃಷಿಕರಿಂದ ಶೇಖರಣ ಮಾಡಿದ ದಾಸ್ತಾನಿಗೆ ಸಂಗ್ರಹಣಾ ಶುಲ್ಕದಲ್ಲಿ ಶೇ. 20ರಷ್ಟು ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ. 25ರಷ್ಟು ರಿಯಾಯಿತಿ ಸಹ ದೊರೆಯಲಿದೆ. ಇದಲ್ಲದೆ ನಿಗಮದ ರಾಜ್ಯಾದ್ಯಂತ ಇರುವ ಉಗ್ರಾಣ ಕೇಂದ್ರಗಳಲ್ಲಿ ಗಣಕೀಕರಣ ವ್ಯವಸ್ಥೆ ಆಗಿದ್ದು, ಆನ್ ಲೈನ್ ವ್ಯವಸ್ಥೆ ಸಹ ಇರಲಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಹಕಾರ ಸಚಿವರು ತಿಳಿಸಿದರು.
ರೈತರಿಂದ ಭತ್ತ, ರಾಗಿ, ಬಿಳಿಜೋಳ, ತೊಗರಿ, ಕಡಲೆ, ಹೆಸರು, ಉದ್ದು ಸೇರಿದಂತೆ ಮೊದಲಾದ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದ್ದು ಇವುಗಳನ್ನು ರಾಜ ಉಗ್ರಾಣಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೃಷಿ ಸಚಿವ ಬಿ. ಸಿ. ಪಾಟೀಲ್ ಸೇರಿದಂತೆ ಇತರ ಪ್ರಮುಖರು ಇದ್ದರು.