ನಿಂಬೆಹಣ್ಣು ಹಿಡಿದು ಜ್ಯೋತಿಷ್ಯ ನಂಬಿ ಅಧಿಕಾರ ನಡೆಸುವರ ಮುಂದೆ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ -ಕಟೀಲ್

ಹಾಸನ: ಹಾಸನದಲ್ಲಿ ನಿಂಬೆಹಣ್ಣು ಹಿಡಿದು ಜ್ಯೋತಿಷ್ಯ ನಂಬಿ ಅಧಿಕಾರ ನಡೆಸುವವರ ಮುಂದೆ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಹೊರವಲಯದ ಎಚ್ ಕೆ ಎಸ್ ಇಂಟನ್ರ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಕೋಷ್ಟಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೂಂಡಾಗಿರಿ ಮಾಡುವ ಪ್ರವೃತ್ತಿ ನಮ್ಮದಲ್ಲ ಎಂದು ಅವರು ಹೇಳಿದರು.
ಪಕ್ಷಾಂತರ ಮಾಡುವ ಮೂಲಕ ಅಧಿಕಾರ ಹಿಡಿದ ನಾಯಕರು ಇಂದು ರಾಮ ಭಕ್ತರನ್ನು ರೌಡಿಗಳು ಎಂದು ಜರೆದಿರುವುದು ಸರಿಯಲ್ಲ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಮ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಆದರೆ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಮನೆಗೆ ರೌಡಿಗಳಂತೆ ಬಂದು ದೇಣಿಗೆಗೆ ಬೇಡಿಕೆ ಇಡುತ್ತಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು. ಸುಪ್ರೀಂಕೋರ್ಟ್ ತೀರ್ಪಿನಂತೆ ರಾಮಮಂದಿರ ನಿರ್ಮಾಣವಾಗುತ್ತಿರುವುದು ಕುಮಾರಸ್ವಾಮಿಯವರಿಗೆ ಗೊತ್ತಿಲ್ಲವೇ ಎಂದ ಅವರು, ಈ ರೀತಿ ಹೇಳಿಕೆ ನೀಡುವ ಮೂಲಕ ಸುಪ್ರೀಂಕೋರ್ಟಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಆರೆಸ್ಸೆಸ್-ಬಿಜೆಪಿ ನಿರ್ಮಾಣ ಮಾಡುತ್ತಿಲ್ಲ ಬದಲಿಗೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಮಾಡುತ್ತಿದೆ ಎಂಬುದು ತಿಳಿದಿರಲಿ ಎಂದರು.
ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು -ಉಪಾಧ್ಯಕ್ಷರು ಹಾಗೂ ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಬೇಲ್ ನಲ್ಲಿ ಇದ್ದಾರೆ ಅಂತವರು ಈ ರೀತಿ ರಾಮಮಂದಿರ ನಿರ್ಮಾಣದ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದರು.
ವ್ಯಕ್ತಿ ನಿರ್ಮಾಣದೊಂದಿಗೆ ರಾಷ್ಟ್ರ ನಿರ್ಮಾಣದ ಕನಸನ್ನು ಹೊಂದಿರುವ ಮೋದಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಆರು ದಶಕಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಗರೀಬಿ ಹಠಾವೋ ಎಂದು ಹೇಳುತ್ತಾ ಜನರನ್ನು ಬಡವರನ್ನಾಗಿಸಿ ಅವರ ನಾಯಕರೆಲ್ಲ ಶ್ರೀಮಂತರಾಗಿದ್ದಾರೆ. ಇಂತಹ ದುರಾಡಳಿತ ಬಿಜೆಪಿ ಪಕ್ಷ ಮಾಡಿಲ್ಲ ಎಂದು ಅವರಿ ತಿಳಿಸಿದರು.
ಅಧಿಕಾರಕ್ಕೆ ಅಹಿಂದ-ಸರ್ಕಾರ ಬಂದ ನಂತರ ಸ್ವಹಿಂದ ಎಂದು ಆಡಳಿತ ನಡೆಸುವ ಇವರು ನಮಗೆ ಪಾಠ ಹೇಳುವ ಅಗತ್ಯವಿಲ್ಲ ಎಂದರು.
ಬಿಜಾಪುರದಲ್ಲಿ 16 ಜಿಲ್ಲೆಗಳ ಪ್ರಕೋಷ್ಟ ಗಳ ಸಭೆ ನಡೆದಿದ್ದು ಇಂದು ಹಾಸನದಲ್ಲಿ 21 ಜಿಲ್ಲೆಯ ಪ್ರಕೋಷ್ಟಗಳ ಸಭೆ ನಡೆಯುತ್ತಿದ್ದು, ಹತ್ತು ವರ್ಷಗಳಿಂದ ಉತ್ತಮವಾಗಿ ಸಂಘಟನೆ ಮಾಡುವ ಮೂಲಕ ಪಕ್ಷ ಸಂಘಟನೆಯಲ್ಲಿ ಎಲ್ಲಾ ವರ್ಗಗಳ ನಾಯಕರನ್ನು ಒಂದಾಗಿ ಸೇರಿಸಿ ಸಂಘಟನೆಯ ಮುಖ್ಯ ಉದ್ದೇಶ ಇದಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.