ಮೈಸೂರು: ರಾಮ ಮಂದಿರಕ್ಕೆ ಜನರು ನೀಡುವ ದೇಣಿಗೆಯ ಲೆಕ್ಕ ಕೇಳುವುದು ನನ್ನ ಹಕ್ಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾನು ಈ ದೇಶದ ಪ್ರಜೆ, ಹಣ ನಾನೇ ಕೊಡಲಿ ಅಥವಾ ಬೇರೆಯವರೆ ಕೊಡಲಿ. ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ. ಲೆಕ್ಕ ಕೇಳುವುದು ನನ್ನ ಹಕ್ಕು. ಈ ಅಧಿಕಾರ ನನಗೆ ಇದೆ ಎಂದರು ಸಿದ್ದರಾಮಯ್ಯ.
ಲೆಕ್ಕ ಕೊಡಲು ಇವರು ಹಿಂದೇಟು ಹಾಕುತ್ತಿದ್ದಾರೆ ಅಂದರೆ ಹಣ ದುರುಪಯೋಗ ಆಗುತ್ತಿದೆ ಎಂಬರ್ಥ ಎಂದವರು ತಿಳಿಸಿದರು.
ಈ ಹಿಂದೆ ಕೂಡ ಇಟ್ಟಿಗೆ, ದುಡ್ಡು ತಗೊಂಡು ಹೋದರೋ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅಂತ ಹೇಳಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಒಂದೂವರೆಸಾವಿರ ಕೋಟಿ ಕಲೆಕ್ಷನ್ ಆಗಿದೆ ಅಂತ ಹೇಳಿದ್ದಾರೆ. ಅದರ ಲೆಕ್ಕ ಕೊಡಬೇಕಲ್ಲ, ಅದು ಸಾರ್ವಜನಿಕರ ಹಣ, ನಾನು ಭ್ರಷ್ಟಾಚಾರ ಅಂತ ಹೇಳಕೋಗಲ್ಲ, ಅದರ ಲೆಕ್ಕ ಕೊಡಬೇಕು ಅವರು ಎಂದರು.
ಯಾರೇ ಹಣ ಸಂಗ್ರಹಿಸಿದರೂ ಲೆಕ್ಕ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ನಾನು ನಮ್ಮ ಊರಿನಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಿಸಲಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳಿದರು.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಸರ್ಕಾರ ಇದರಲ್ಲೂ ಹಣ ಲೂಟಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಕೊರೊನಾ ಎರಡನೇ ಅಲೆ ಶುರುವಾಗತ್ತೆ ಅಂತ ಗೊತ್ತಿದ್ದರೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಯಾವುದರಲ್ಲೂ ಸಿರಿಯಸ್ ನೆಸ್ ಇಲ್ಲ, ದುಡ್ಡು ಹೊಡೆಯುವುದರಲ್ಲಿ ಮಾತ್ರ ಸಿರಿಯಸ್ ನೆಸ್ ಇದೆ ಎಂದು ಸಿದ್ದರಾಮಯ್ಯನವರು ಟೀಕಿಸಿದರು.
ಮೈಸೂರು ಪಾಲಿಕೆ ಮೇಯರ್ ಚುನಾವಣಾ ಮೈತ್ರಿ ವಿಷಯದಲ್ಲಿ ಒಗ್ಗಟ್ಟಾಗಿರಲು ಹೇಳಿದ್ದೇನೆ. ಯಾವುದೇ ತೀರ್ಮಾನ ಮಾಡಬೇಡಿ, ಚುನಾವಣೆನಲ್ಲಿ ನಾವು ಯಾರ ಮೇಲೂ ಮೈಮೇಲೆ ಬಿದ್ದು ಅಧಿಕಾರ ಮಾಡಲು ಹೋಗಬಾರದು ಎಮದು ಸೂಚಿಸಿದ್ದೇನೆ ಎಂದರು.
ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಒಂದು ಒಪ್ಪಂದ ಆಗಿತ್ತು. ಹಿಂದೆ ಜೆಡಿಎಸ್ ನವರು ಮೇಯರ್ ಆಗಿದ್ದರು, ಈ ಬಾರಿ ಕಾಂಗ್ರೆಸ್ ಗೆ ಮೇಯರ್ ಗಿರಿ ಬರಬೇಕು, ಆ ರೀತಿ ಏನಾದರೂ ಇದ್ದರೆ ಮಾಡಿ ಎಂದಿದ್ದೇನೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.
ಬಜೆಟ್ ಮಂಡಿಸಿದರೆ ಎಲ್ಲದಕ್ಕೂ ಉತ್ತರವಾಗಲಿದೆ ಎಂದಿರುವ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ನಾನು ಸದನದಲ್ಲಿ ಹೇಳಿದ್ದಕ್ಕೇ ಉತ್ತರ ಕೊಟ್ಟಿಲ್ಲ ಅವರು. ರಾಜ್ಯಪಾಲರ ಭಾಷಣದ ಮೇಲೆ ಮೂರು ಗಂಟೆ ಪ್ರಶ್ನೆ ಮಾಡಿದ್ದೆ. ಏನೋ ಬರೆದುಕೊಂಡು ಬಂದರು ಅದನ್ನೇ ಓದಿ ಹೋಗಿದ್ದಾರೆ. ಅವರಿಂದ ಬಜೆಟ್ ನಿರೀಕ್ಷೆ ಏನಿರತ್ತೆ ಎಂದರು.
ರಾಮ ಮಂದಿರ ದೇಣಿಗೆ: ಲೆಕ್ಕ ಕೇಳುವುದು ನನ್ನ ಹಕ್ಕು -ಸಿದ್ದರಾಮಯ್ಯ

