ಪುದುಚೇರಿ: ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸೋಮವಾರ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ಎ. ಜಾನ್ ಕುಮಾರ್, ಲಕ್ಷ್ಮಿ ನಾರಾಯಣನ್ ಮತ್ತು ಡಿಎಂಕೆ ಶಾಸಕ ಕೆ. ವೆಂಕಟೇಶನ್ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು.
ಈ ಹಿನ್ನೆಲೆ ಲೆಫ್ಟಿನೆಂಟ್ ಗವರ್ನರ್ ತಮಿಳ್‍ಸಾಯಿ ಸೌಂದರರಾಜನ್ ಅವರು ನಾರಾಯಣಸ್ವಾಮಿ ಅವರಿಗೆ ಸೋಮವಾರ ವಿಶ್ವಾಸಮತ ಯಾಚನೆ ನಡೆಸುವಂತೆ ಸುಚಿಸಿದರು.
ವಿಶ್ವಾಸಮತ ಯಾಚನೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದರಿಂದ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ.
33 ಸದಸ್ಯಬಲದ ಪುದುಚೇರಿ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಪರವಾಗಿ 13 ಮತ ಬಿದ್ದರೆ ವಿರುದ್ಧವಾಗಿ 14 ಮತಗಳು ಬಿದ್ದವು.
ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ವಿಧಾನಸಭೆಗೆ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ರಾಜಕೀಯ ಬೆಳವಣಿಗೆ ನಡೆದಿದೆ.
ಪುದುಚೇರಿಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

