ಬೆಂಗಳೂರು: ಶೀಘ್ರದಲ್ಲಿಯೇ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಯನ್ನು ಜಾರಿಗೆ ತರಲಾಗುತ್ತಿದ್ದು, ಮಾ. 2ರಂದು ಘೋಷಣೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ನೂತನ ಪೂರಕ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಅವರು ಮಾತನಾಡಿದರು.
ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ನಾವು ದೇಶದಲ್ಲೇ ಮುಂಚೂಣಿಯಲ್ಲಿದ್ದೇವೆ. ಹೀಗಾಗಿ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ. ಆ ನೀತಿ ಬಂದ ನಂತರ ಈ ಕ್ಷೇತ್ರದಲ್ಲೂ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತವೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಯಾಂಪಸ್: ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜನ್ನು ಇನ್ನೂ ಉನ್ನತ ದರ್ಜೆಗೆ ಏರಿಸಲಾಗುವುದು. ಈ ಕ್ಯಾಂಪಸ್ಸಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವಾರು ಸಂಸ್ಥೆಗಳಿವೆ. ಡಿಪೆÇ್ಲಮೋ, ಎಂಜಿನಿಯರಿಂಗ್ ಸೇರಿ ಪ್ರತ್ಯೇಕವಾಗಿ ನಾಲ್ಕಾರು ಸಂಸ್ಥೆಗಳು ಇಲ್ಲಿವೆ. ಈ ಬಗ್ಗೆ ನಾನು, ನಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಜತೆ ಮಾತುಕತೆ ನಡೆಸಿ ಇಷ್ಟೆಲ್ಲ ಸಂಸ್ಥೆಗಳನ್ನು ಒಳಗೊಂಡ ಈ ಕ್ಯಾಂಪಸ್‍ಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣಾರ್ಥ ನಾಲ್ವಡಿ ಕ್ಯಾಂಪಸ್ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಘೋಷಿಸಿದರು.
ಗುಣಮಟ್ಟದ ಬೋಧನೆ-ಕಲಿಕೆಯ ಗುರಿಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಂತ್ರಿಕ ಶಿಕ್ಷಣ ಮುಗಿದ ಕೂಡಲೇ ಉದ್ಯೋಗ ಸಿಗುವಂಥ ವ್ಯವಸ್ಥೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಈಗಾಗಲೇ ಡಿಪೆÇ್ಲಮಾ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ. ಆ ಪಠ್ಯವನ್ನು ರಾಷ್ಟ್ರೀಯ ಕೌಶಲ್ಯ ಮಾನದಂಡಕ್ಕೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಗುಣಮಟ್ಟದ ಕಲಿಕೆಯ ಬಗ್ಗೆ ಮಾತನಾಡುವ ನಾವು ಗುಣಮಟ್ಟದ ಬೋಧನೆಯ ಬಗ್ಗೆಯೂ ಮಾತನಾಡಬೇಕು. ಹಾಗೆ ಆಗಬೇಕಾದರೆ, ಬೋಧಕರ ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕು ಎಂದರು ಡಿಸಿಎಂ.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಡಿಸಿಎಂ ಅವರು, ಟೆಕ್ನಾಲಜಿ ಸುಧಾರಣೆ ಆದಂತೆಲ್ಲ ಕಲಿಕೆಯ ಮಾದರಿಯೂ ಬದಲಾಗುತ್ತಲೇ ಇರುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಂಡು ವ್ಯಾಸಂಗ ಮಾಡಬೇಕು. ಕಾಲೇಜುಗಳಲ್ಲಿ ಪ್ರತಿಯೊಂದನ್ನು ಸ್ಫೂನ್ ಫೀಡಿಂಗ್ ಮಾಡಲಾಗದು. ಸ್ವಯಂ ಕಲಿಕೆಯ ಸಾಮಥ್ರ್ಯವನ್ನು ಎಲ್ಲರೂ ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಗಿಟ್ಟಿಸಬೇಕಾದರೆ ಶಿಕ್ಷಣದಲ್ಲಿ ಇನ್ನೊಬ್ಬರ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ನಿರ್ದೇಶಕ ತಳವಾರ, ಪ್ರಾಂಶುಪಾಲರಾದ ಸಲ್ಮಾ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.


