ರಾಸಲೀಲೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿದ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಶಾಸಕ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದರು.
ರಾಸಲೀಲೆ ಸಿಡಿ ಪ್ರಕರಣದ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆಯಲು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಭಾನುವಾರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ದಿನೇಶ್ ಕಲ್ಲಹಳ್ಳಿ ದೂರು ನೀಡುವ ಮುನ್ನವೇ ವಿಡಿಯೋ ಬಿಡುಗಡೆ ಮಾಡಿದ್ದರು. ಇದಕ್ಕಾಗಿ 15ರಿಂದ 17 ರೂ. ಕೋಟಿ ನೀಡಿ ಸರ್ವರ್ ಖರೀದಿಸಲಾಗಿದೆ. ನಕಲಿ ಸಿಡಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಪ್ರಕರಣದಲ್ಲಿ ಯುವತಿಯೇ ಮೊದಲ ಆರೋಪಿಯಾಗಿದ್ದು ಆಕೆಯ ಹಿಂದೆ ಮತ್ತೆ ನಾಲ್ವರು ಇದ್ದಾರೆ. ಯುವತಿಗೆ 50 ಲಕ್ಷ ಹಣ ಮತ್ತು ದುಬೈನಲ್ಲಿ ಉದ್ಯೋಗ ಭರವಸೆ ನೀಡಿ ಅವಳನ್ನು ಈ ಪ್ರಕರಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿಯನ್ನು ಸಂತ್ರಸ್ತೆ ಎಂದು ಕರೆಯಬೇಡಿ, ಇದರ ಹಿಂದೆ ಷಡ್ಯಂತ್ರವಿದೆ ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿಯವರನ್ನು ಸಚಿವ ಸ್ಥಾನದಿಂದ ಇಳಿಸುವ ಮುಖ್ಯ ಉದ್ದೇಶವೇ ಇವರದ್ದಾಗಿತ್ತು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಪ್ರಕರಣ ಹನಿಟ್ರ್ಯಾಪ್ ಆರೋಪದಲ್ಲಿ ಕೊನೆಗಾಣಲಿದೆ. ಇದರ ಹಿಂದೆ ಕಾಣದ ಕೈಗಳಿದ್ದು ಬಿಜೆಪಿ ಹಾಗೂ ಜಾರಕಿಹೊಳಿ ಕುಟುಂಬಕ್ಕೆ ಮುಜುಗರ ತರುವುದು ಇದರ ಉದ್ದೇಶ ಎಂದು ಹೇಳಿದ ಅವರು ಇದಕ್ಕೆಂದೇ ದಿನೇಶ್ ಕಲ್ಲಹಳ್ಳಿಯವರನ್ನು ಸಹ ದಿಕ್ಕು ತಪ್ಪಿಸಿದ್ದಾರೆಂದು ಬಾಲಚಂದ್ರ ಜಾರಕಿಹೆಳಿ ತಿಳಿಸಿದರು.
ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದಲ್ಲಿ ಬಿಜೆಪಿಯ ಯಾರ ಪಾತ್ರವಿಲ್ಲ. ಇದರಲ್ಲಿ ವಿರೋಧ ಪಕ್ಷಗಳು ಹಾಗೂ ಇತರರು ಸೇರಿದ್ದಾರೆಂದರು.