ಬೆಂಗಳೂರು: ಅಭಿವೃದ್ಧಿಗೆ ಪೂರಕವಲ್ಲದ ಗೊತ್ತುಗುರಿಯಿಲ್ಲದ ಟೊಳ್ಳು ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಹಿಂದೆ ಪಾರದರ್ಶಕವಾಗಿ ಕಳೆದ ವರ್ಷ ಇಲಾಖೆಗೆ ಇಷ್ಟು ಮೀಸಲಿಡಲಾಗಿದೆ ಎಂದು ಸ್ಪಷ್ಟವಾಗಿ ಇಲಾಖೆಯ ಹೆಸರು ಉಲ್ಲೇಖಿಸಲಾಗುತ್ತಿತ್ತು. ಆದರೆ ಯಡಿಯೂರಪ್ಪ ಬಜೆಟ್ ಅನ್ನು ೬ ವಲಯಗಳಾಗಿ ವಿಭಾಗಿಸಿ ಯಾವ ಇಲಾಖೆಗೆ ಎಷ್ಟು ಕೊಟ್ಟಿದ್ದಾರೆ ಎಂಬ ಅಂಕಿ ಅಂಶಗಳನ್ನೂ ತಿಳಿಸದೆಯೇ ಬಜೆಟ್ ಅನ್ನು ಬಿಚ್ಚಿಡುವುದಕ್ಕಿಂತ ಗೌಪ್ಯವಾಗಿ ಮಾಹಿತಿ ಮುಚ್ಚಿಡುವುದನ್ನೇ ಮಾಡಿದ್ದಾರೆ. ಈ ಬಜೆಟ್ ಒಟ್ಟಾರೆ ಪಿತೂರಿಯ ಬಜೆಟ್ ಆಗಿದೆ ಎಂದರು.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ದೇಶದಲ್ಲಿ ಸುವರ್ಣ ಯುಗ ಬರುತ್ತದೆ ಎಂದಿದ್ದರು. ಆದರೆ ಎಲ್ಲಿದೆ ಸುವರ್ಣ ಯುಗ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದಿಂದ ಸಂಸತ್ತಿಗೆ ಆರಿಸಿ ಹೋಗಿದ್ದ ಬಿಜೆಪಿ ಸಂಸದರು ಯಾರೊಬ್ಬರು ಬೆಲೆ ಹೆಚ್ಚಳ, ಅಭಿವೃದ್ಧಿ ಕುಂಠಿತ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಕೇಂದ್ರದಲ್ಲಿ ಧ್ವನಿಯೆತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮಂಡಿಸಿದ್ದು ಜನ ವಿರೋಧಿ, ಅಭಿವೃದ್ಧಿ ವಿರೋಧಿ, ರಾಜ್ಯ ದಿವಾಳಿ ಮಾಡುವ, ಗೊತ್ತು ಗುರಿ ಇಲ್ಲದ ಬಜೆಟ್ ಎಂದು ಸಿದ್ದರಾಮಯ್ಯ ಟೀಕಿಸಿದರು.
ಅನೈತಿಕ ಸರ್ಕಾರದ ಬಜೆಟ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಜೆಟ್ ಅನ್ನು ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಗೊತ್ತು ಗುರಿಯಿಲ್ಲದ ಟೊಳ್ಳು ಬಜೆಟ್ -ಸಿದ್ದರಾಮಯ್ಯ

