ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಲೋಕದಲ್ಲಿ ನೆಡೆವ ಎಲ್ಲ ವಿಸ್ಮಯಗಳಿಗೆ ಜಗತ್ತು ಜಡವಾಗಿರುತ್ತದೆ ಅಂತೆಯೇ ಯಾವುದನ್ನೂ ನಾವು ತೂಗಲಾರದಂತ ವಿಶೇಷ ಶಕ್ತಿಯನ್ನೂ ಹೊಂದಿರುತ್ತದೆ ಇಂತಹ ಚೈತನ್ಯಕ್ಕೆ ತಲೆಬಾಗಿ ನಮಿಸು.
ಡಿ. ವಿ ಗುಂಡಪ್ಪನವರ ಈ ಕಗ್ಗದ ಸಾಲುಗಳಂತೆ ಪ್ರಕೃತಿ ನಮಗೆ ನೀಡಿದ ಎಲ್ಲಾ ಚೈತನ್ಯಗಳಿಗೆ ನಮಿಸಲೇಬೇಕು, ಅಂತೆಯೇ ನಮ್ಮೊಂದಿಗೆ ಇಂತಹ ಅದ್ಭುತ ಸಾಲುಗಳನ್ನು ಕೊಟ್ಟಿರುವಂತಹ ಆಧುನಿಕ ಸರ್ವಜ್ಞರಿಗೆ ನಮ್ಮ ನಮನ ಸಲ್ಲಿಸಲೇಬೇಕು.
ಸಾಹಿತ್ಯ ಒಂದು ರೀತಿ ಮನುಷ್ಯನಿಗೆ ಆದರ್ಶಗಳಿದ್ದಂತೆ ಅಲ್ಲದೆ ಯಾವುದೇ ಶತ ಶತಮಾನಗಳ ಸಾಹಿತ್ಯವನ್ನು ನೋಡಿದರೂ ಅಲ್ಲಿ ನಾವು ಕಾಣುವುದು ಸಂಸ್ಕøತಿ, ಆಧ್ಯಾತ್ಮ, ದಾರ್ಶನಿಕ ಚಿಂತನೆ, ಒಳಿತಲ್ಲಿ ನಡೆಸುವ ಹಾದಿಯ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.
ಇದೇ ರೀತಿ ಆಧುನಿಕ ಬದುಕಿನಲ್ಲಿ ‘ಮಂಕುತಿಮ್ಮನ ಕಗ್ಗ’ ಇಂತಹ ಕೃತಿಯ ಮೂಲಕ ನಮ್ಮೆಲ್ಲರಲ್ಲಿ ಸುಸಂಸ್ಕೃತ ಮೌಲ್ಯವನ್ನು ಬಿತ್ತಿದವರು ಡಿ.ವಿ. ಗುಂಡಪ್ಪ.
ತಾಯಿ ಅಲಮೇಲು, ತಂದೆ ವೆಂಕಟರಮಣಯ್ಯನವರ ಮಗನಾಗಿ 1887, ಮಾರ್ಚ್ 17ರಂದು ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ, ದೇವನಹಳ್ಳಿಯಲ್ಲಿ ಜನಿಸಿದರು. ಇವರು ತಮ್ಮ ಬಾಲ್ಯದಲ್ಲಿಯೇ ಸಂಸ್ಕೃತಾಭ್ಯಾಸದ ಜೊತೆಗೆ ಇಂಗ್ಲೀಷ್ ಪಾಠವನ್ನು ಕೆ.ವಿ.ರಾಮಸ್ವಾಮಿ ಅಯ್ಯರ್ ಎಂಬುವರ ಬಳಿ ಕಲಿತರು. ಅವರು ಎಲ್. ಎಸ್ ತೇರ್ಗಡೆಯಾದ ನಂತರ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು.
ಆದರೆ ಅವರು ತಮ್ಮ ಮೆಟ್ರಿಕುಲೇಷನ್ ನಲ್ಲಿ ನಪಾಸಾದರು ಅಲ್ಲದೇ ಅದೇ ಸಮಯದಲ್ಲೇ ಅವರ ಅಜ್ಜ ಮತ್ತು ಅಜ್ಜಿ ಸಾವಿನಿಂದ ಊರಿಗೆ ಬಂದವರು ತಿರುಗಿ ಮೈಸೂರಿಗೆ ತೆರಳಲೇ ಇಲ್ಲ. ತದನಂತರ ತಮ್ಮ ವಿದ್ಯಾಭ್ಯಾಸವನ್ನು ಕೋಲಾರದ ಹೈಸ್ಕೂಲಿನಲ್ಲಿ ಕಳೆದರು.
ಕೋಲಾರದ ವಿದ್ಯಾಭ್ಯಾಸ ಸಮಯದಲ್ಲಿ ಅಲ್ಲಿ ಚರಿತ್ರೆ ಪಾಠ ಮಾಡುತ್ತಿದ್ದಂತ ಕೃಷ್ಣಸ್ವಾಮಿ ಅಯ್ಯರ್ ರವರು ಲಾರ್ಡ್ ಮಾರ್ಲ ಬರೆದಿರುವಂತ ಗ್ಲಾಡ್ ಸ್ಟನ್ ಜೀವನ ಚರಿತ್ರೆಯನ್ನು ಓದಲು ತಿಳಿಸಿದ್ದರು.
ಅಂತೆಯೇ ಡಿ.ವಿ.ಜಿಯವರು ಆ ಪುಸ್ತಕದ ಓದುವಿಕೆಯಿಂದಲೇ ತಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸಿಕೊಂಡವರು. ಇದೇ ರೀತಿ ತಮ್ಮ ಜ್ಞಾನದ ಬೆಳಕನ್ನು ಬೆಳೆಸುತ್ತ ಬಂದ ಡಿ.ವಿ.ಜಿಯವರು ನಂತರದ ದಿನಗಳಲ್ಲಿ ಎಷ್ಟೋ ಸಂಸ್ಥೆಗಳಿಗೆ ತರ್ಜುಮೆ ಕೆಲಸವನ್ನು ಮಾಡಿ ಬಂದಿದ್ದ ಹಣದಿಂದ ಮತ್ತಷ್ಟು ಪುಸ್ತಕಗಳನ್ನು ಕೊಂಡು ಓದಲು ಪ್ರಾರಂಭಿಸಿದರು.
ಇನ್ನೂ ಫ್ರೌಢಶಾಲೆಯಲ್ಲಿರುವಾಗ ಗುಂಡಪ್ಪನವರಿಗೆ ಭಾಗೀರಥಿ ಎಂಬವರೊಂದಿಗೆ ಮದುವೆಯಾಗುತ್ತಿದ್ದಂತೆ ಸಂಸಾರದ ಹೊರೆ ಹೊರಬೇಕಾದ ಕಾರಣ ಮುಳಬಾಗಿಲು ಶಾಲೆಯಲ್ಲಿ ಬದಲಿ ಉಪಾಧ್ಯಾಯರಾಗಿ ಸೇರಿಕೊಂಡರು.
ಆನಂತರ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಮುಂದೆ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತ ಬಂದವರು ಪತ್ರಿಕೋದ್ಯಮ ವೃತ್ತಿಯನ್ನು ಆಯ್ದುಕೊಂಡರು. ಅಂದಿನ ಸೂರ್ಯೋದಯ ಪ್ರಕಾಶಿಕ, ಮೈಸೂರ್ ಟೈಮ್ಸ್, ವೀರಕೇಸರಿ, ಈವಿನಿಂಗ್ ಮೆಯಿಲ್, ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸಮಾಡಿದರು.
ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು.
ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.
ಕನ್ನಡ ಕಾವ್ಯಕ್ಷೇತ್ರದಲ್ಲಿ ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗ ದ ಮೂಲಕ ಡಿ ವಿ ಜಿ ಮನೆಮಾತಾದವರು.
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಗು ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ
ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು.
ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರ ಲಹರಿಯನ್ನು ಕಾವ್ಯ ಮುಖೇನ ನೀಡಿದ ಡಿ ವಿ ಜಿ ಪತ್ರಕರ್ತರಾಗಿಯೂ ಹೆಸರಾದವರು.
ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ ಮಹನೀಯರು, ಜ್ಞಾಪಕ ಚಿತ್ರಶಾಲೆ ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.
ಡಿ.ವಿ.ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ.
ಡಿ.ವಿ.ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ ಎಂದಿದ್ದಾರೆ.
ಕರ್ನಾಟಕ ಸರ್ಕಾರ ಡಿ.ವಿ.ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ ಡಿ ವಿ ಜಿ ಕೃತಿ ಶ್ರೇಣಿಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ 1-2, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ. ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದ ವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.
ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲೀಷ್-ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ.
ಇವರ ಇಂಗ್ಲೀಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಸತ್ಯಮೂರ್ತಿ ಹಾಗೂಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರುಗಳೂ ಅಂದಿನ ಕಾಲಘಟ್ಟದ ನಮ್ಮ ದೇಶದ ಪ್ರಮುಖ ಪತ್ರಿಕೆಗಳಾಗಿದ್ದ ಸವೆರ್ಂಟ್ ಆಫ್ ಇಂಡಿಯ’ ಹಾಗೂ ಬಾಂಬೆ ಕ್ರಾನಿಕಲ್ ಪತ್ರಿಕೆಗಳು ಮನಸೋಕ್ತವಾಗಿ ಮೆಚ್ಚಿಕೊಂಡಿವೆ.
ಕವಿತೆ: ನಿವೇದನ, ಉಮರನ ಒಸಗೆ, ಮಂಕುತಿಮ್ಮನ ಕಗ್ಗ – I, ಮರುಳ ಮುನಿಯನ ಕಗ್ಗ – II, ಶ್ರೀರಾಮ ಪರೀಕ್ಷಣಂ,
ಅಂತಃಪುರಗೀತೆ, ಗೀತ ಶಾಕುಂತಲಾ.
ನಿಬಂಧ: ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ ಸಂಸ್ಕೃತಿ, ಬಾಳಿಗೊಂದು ನಂಬಿಕೆ.
ನಾಟಕ: ವಿದ್ಯಾರಣ್ಯ ವಿಜಯ, ಜಾಕ್ ಕೇಡ್, ಮ್ಯಾಕ್ ಬೆಥ್.
ಇಂಗ್ಲಿಷಿನಲ್ಲಿ: Vedanta and Nationalism (1909), The Problems of Indian Native States (1917), The Native States in the Empire (1918), The Indian Native States and the Montagu-Chelmsford Report (1918), The Government of India and the Indian States, The Indian States Committee : A Note on its Terms of Reference and Their Implications (1928), All About Mysore (1931), The States and their People in the Indian Constitution (1931).
ಡಿ.ವಿ.ಗುಂಡಪ್ಪನವರು 1932ರಲ್ಲಿ ಮಡಿಕೇರಿಯಲ್ಲಿ ನಡೆದ 18ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.
1961ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ.ವಿ.ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ.
1967 ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
1973 ರಲ್ಲಿ ಡಿ.ವಿ.ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು.
1974ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ ಪ್ರಶಸ್ತಿ” ನೀಡಿ ಗೌರವಿಸಿತು.
ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ 1988ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು.
ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಶ್ರೀರಾಮ ಪರೀಕ್ಷಣಂ, ಅಂತಃಪುರಗೀತೆ, ಗೀತಾ ಶಾಕುಂತಲಾ, ನಿವೇದನ, ಉಮರನ ಒಸಗೆ, ವಸಂತ ಕುಸುಮಾಂಜಲಿ ಕವನಸಂಕಲನಗಳನ್ನುಹೊರತಂದಿದ್ದಾರೆ.
ಮಕ್ಕಳ ಸಾಹಿತ್ಯವಾಗಿ ಬೆಕ್ಕೋಜಿ, ನಾಟಕಗಳಾಗಿ ಕನಕಾಲಕಾ, ಸಾಹಿತ್ಯ ಶಕ್ತಿ, ಸಂಸ್ಕೃತಿ, ಕಾವ್ಯ ಸ್ವಾರಸ್ಯ ಮುಂತಾದ ನಿಬಂಧಗಳು, ಕನ್ನಡ ಮ್ಯಾಕ್‍ಬೆತ್, ವಿದ್ಯಾರಣ್ಯ ವಿಜಯ, ಜಾಕ್‍ಕೇಡ್, ಪ್ರಹಸನತ್ರಯೀ, ಪರಶುರಾಮ, ತಿಲೋತ್ತಮ ಹಾಗೂ ವಿದ್ಯಾರಣ್ಯ ವೃತ್ತಾಂತ, ದಾದಾಬಾಯಿ ನವರೋಜಿ ಮುಂತಾದ ಜೀವನ ಚರಿತ್ರೆಗಳನ್ನು ಸಹ ಬರೆದಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಶ್ರೀಮದ್ಭಗವದ್ಗೀತಾ ತಾತ್ಪರ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ 1974ರಲ್ಲಿ ಪದ್ಮಭೂಷಣ ಪ್ರಶಸ್ತಿ ಹೀಗೆ ಹಲವು ಸನ್ಮಾನಗಳನ್ನು ಡಿ.ವಿ.ಜಿ ಅವರು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀಯುತ ಡಿ.ವಿ. ಗುಂಡಪ್ಪನವರು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಈ ಮಂಕುತಿಮ್ಮನ ಕಗ್ಗದಲ್ಲಿ ತುಂಬಿದ್ದಾರೆ. ಅವರ ಈ ಕೃತಿಯು ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದೆ.
ಅನಾರೋಗ್ಯವಾಗಿದ್ದಾಗಲೂ ಡಿವಿಜಿಯವರು ವಿನೋದ ಭಾವದಲ್ಲೇ ಬೆಳೆದವರು. ಒಮ್ಮೆ ಸಾರ್ವಜನಿಕರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಅವರಿಗೆ ಕೊಡಲು ಸಮಾರಂಭ ಏರ್ಪಡಿಸಿದ್ದರು. ಅದನ್ನು ಮುಟ್ಟದೆ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಇದು ಡಿವಿಜಿಯವರ ದೊಡ್ಡತನ.
ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳ ಸಮಹಿತವಾದ ಸಾಹಿತ್ಯ ಎಂದು ಹಾ.ಮಾ.ನಾಯಕರು ಹೇಳಿದ್ದಾರೆ. ಡಿ.ವಿ.ಜಿಯವರು ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥ ವೃಕ್ಷವಿದ್ದಂತೆ ತಮ್ಮನ್ನು ತಾವು ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಆಡಳಿತ ಹಾಗೂ ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಸಮಗ್ರವಾಗಿ ಸಮದೂಗಿಸಿಕೊಂಡು ಬಂದವರು.
ತಮ್ಮ 17ನೇ ವಯಸ್ಸಿನಲ್ಲಿ ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಿ ಅದೇ ಭಾμÉಯಿಂದ ಹಲವು ಲೇಖನಗಳ ತರ್ಜುಮೆ ಮಾಡಬೇಕೆಂದರೆ ಒಂದು ಸಾಹಸದ ಕೆಲಸವೇ ಸರಿ.
ವಿಶದಮಾದೊಂದು ಜೀವನಧರ್ಮದರ್ಶನವ |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನು-ಮಂಕುತಿಮ್ಮ ||
ಜೀವನ ಎಂದ ಮೇಲೆ ಕಷ್ಟ-ಸುಖ, ಒಳಿತು-ಕೆಡುಕು ಎಲ್ಲವೂ ಇದ್ದೇ ಇರುತ್ತದೆ. ಕಷ್ಟವನ್ನು ಸುಖವನ್ನಾಗಿ, ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ಪ್ರಯತ್ನವೇ ಜೀವನದ ಜೀವಾಳವಾಗಬೇಕು ಎಂದು ಹೇಳುತ್ತಾರೆ. ಅಂತೆಯೇ ಡಿ.ವಿ.ಜಿಯವರ ಬದುಕಿನ ದೃಷ್ಟಿಯೂ ಕೂಡ ಅದೇ. ಇಂತಹ ದಾರ್ಶನಿಕರ ಉಪದೇಶಗಳು ಸದಾ ಮನುಕುಲದ ಯಶಸ್ಸಿಗೆ ಕಾರಣವಾಗುತ್ತವೆ.
ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರ ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ.
ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ|
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ|
ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಬ್ರಿತೊವ್ವೀ|
ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ||
ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ, ಪಳದ್ಯ, ಕೋಸಂಬರಿ, ತೊವ್ವೆ, ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.
ಡಿ.ವಿ. ಗುಂಡಪ್ಪನವರು 1975 ಅಕ್ಟೋಬರ್ 7ರಂದು ಇಹಲೋಕ ತ್ಯಜಿಸಿದರೂ ಅವರ ಸಾಹಿತ್ಯ ಮುಖೇನ ಎಲ್ಲ ಮನಮನೆಗಳಲ್ಲಿ ನೆಲೆಸಿದ್ದಾರೆ.
2003ರಲ್ಲಿ ಬೆಂಗಳೂರಿನ ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.

