ನಾನು ರಾಜಕೀಯ ನಿವೃತ್ತಿ ಆಗ್ತಿನಿ; ನೀವು ಬಂದು ಪಕ್ಷ ಕಟ್ಟಿ: ಜಿಟಿಡಿಗೆ ಸಾ.ರಾ. ಮಹೇಶ್ ಆಹ್ವಾನ

ಮೈಸೂರು: ನಾನು ರಾಜಕೀಯ ನಿವೃತ್ತಿ ಆಗ್ತಿನಿ. ನೀವು ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ ಎಂದು ಶಾಸಕ ಸಾ. ರಾ. ಮಹೇಶ್ ಶಾಸಕ ಜಿ. ಟಿ. ದೇವೇಗೌಡ ಅವರಿಗೆ ಆಹ್ವಾನ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಶಾಸಕ ಸಾ.ರಾ ಮಹೇಶ್ ಮಾತನಾಡಿದರು.
ನಿಮ್ಮನ್ನ ನಮ್ಮ ನಾಯಕರು ಅಂತ ಒಪ್ಪಿಕೊಂಡಿದ್ದೇವೆ. ಬನ್ನಿ ನಾಳೆಯಿಂದ ಜವಾಬ್ದಾರಿ ತೆಗೆದುಕೊಳ್ಳಿ. ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ ಎಂದು ಸಾ.ರಾ ಮಹೇಶ್ ಹೇಳಿದರು.
ಯಾಕೇ ನನ್ನ ಮೇಲೆ ಇಷ್ಟು ದ್ವೇಷ. ಯಾಕಾಗಿ ನನ್ನನ್ನ ವಿರೋಧ ಮಾಡ್ತಿರಾ. ನೀವು ಬರುವುದಾದರೆ ನಾನು ಪಾರ್ಟಿ ಬಿಡ್ತಿನಿ. ಇನ್ನೆರಡು ವರ್ಷ ಆದ ಮೇಲೆ ನಾನೇ ಸಾರ್ವಜನಿಕ ಜೀವನದಿಂದ ದೂರ ಇರ್ತಿನಿ. ನೀವು ಬಂದು ಪಾರ್ಟಿ ಕಟ್ಟಿ ಎಂದರು.
ಶಾಸಕ ಜಿ.ಟಿ ದೇವೇಗೌಡ ಸಾ. ರಾ. ಮಹೇಶ್ ರನ್ನು ಶಕುನಿ, ಮಂಥರೆ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಮಹಾಭಾರತದಲ್ಲಿ ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿತ್ತ..? ಧರ್ಮ ಸಂಸ್ಥಾಪನೆ ಆಗ್ತಿತ್ತಾ… ನನ್ನನ್ನು ಮಂಥರೆ ಎಂದಿದ್ದಿರಾ ಮಂಥರೇ ಇಲ್ಲದಿದ್ರೆ ರಾವಣ ಸಂಹಾರ ಆಗ್ತಿತ್ತಾ.. ರಾಮ ರಾಜ್ಯ ನಿರ್ಮಾಣ ಆಗ್ತಿತ್ತ.. ಅವರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ಆಲದ ಮರ ನನ್ನನ್ನು ಕಡಿಯಲು ಆಗಲ್ಲ ಅಂತೀರಾ? ನಾವು ನಿಮ್ಮನ್ನ ಕಡಿತಿವಿ ಎಂದು ಎಲ್ಲೂ ಹೇಳಿಲ್ಲ. ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ಅದಕ್ಕೆ ಸರಿಯಾದ ಸಸಿಯನ್ನ ಹುಡುಕಿ ನೆಡುವ ಕೆಲಸ ಕುಮಾರಣ್ಣ ಈಗ ಮಾಡುತ್ತ್ತಿದ್ದಾರೆ ಎಂದು ಅವರು ಹೇಳಿದರು.