ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಹಾಳು ಮಾಡಿದ ಮಹಾನ್ ನಾಯಕ ಯಾರು ಅಂತಾ ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ ಎಂದು ಜಿಲ್ಲಾ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಅನ್ನೋದು ಗೊತ್ತಾಗಲಿದೆ. ಮನೆ ಹಾಳು ಮಾಡಿದ ಮಹಾನ್ ನಾಯಕ ಯಾರು ಅಂತಾ ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ. ಅದರಲ್ಲಿ ನಾನು ಸಹ ಒಬ್ಬ. ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಅನ್ನೋದು ಗೊತ್ತಾಗಲಿದೆ ಎಂದರು.
ಎಸ್ ಐ ಟಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಡಿಕೆ ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ. ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರಿದ್ದಾರೆ. 10 ಮತ ಹಾಕಿಸುವವನೇ ಈಗ ಮಹಾನ್ ನಾಯಕನೇ. ಅದರಲ್ಲಿ ಇವರು ನಾವು ಅಂತಾ ಏಕೆ ಅಂದುಕೊಳ್ಳಬೇಕು. ಇಂತಹ ಸಿಡಿ ಮಾಡಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯಕ್ಕೆ ಹಂಚಿದ್ದಾರೆ. ಮನೆ ಮನಗಳನ್ನು ಮುರಿದಿದ್ದಾರೆ. ಇಂತಹ ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ ಎಂದರು.
ಸದನದಲ್ಲಿ ನ್ಯಾಯಾಲಯಕ್ಕೆ ಹೋದ ಸಚಿವರಿಂದ ಉತ್ತರ ಪಡೆಯುವುದಿಲ್ಲ ಎಂಬ ಕಾಂಗ್ರೆಸ್ ಪಕ್ಷದ ನಾಯಕರ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಎಸ್ ಟಿ ಸೋಮಶೇಖರ್, ನಮ್ಮ ವೈಯಕ್ತಿಕ ತೇಜೋವಧೆ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದವು ಎಂದರು.
ಇದೇ ವೇಳೆ ಮೇಟಿ ಪ್ರಕರಣದ ಉದಾಹರಣೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್, ಮೇಟಿ ಪ್ರಕರಣದಲ್ಲಿ ಅವರ ಮಾನ ಹರಾಜಾಯ್ತು. ಮನೆ ಮನಗಳು ಮುರಿದು ಹೋದವು. ಮಾನ ಮರ್ಯಾದೆ ಎಲ್ಲವೂ ಹೋಯಿತು. ಮೂರು ತಿಂಗಳ ನಂತರ ಅದು ನಕಲಿ ಸಿಡಿ ಎಂದು ಸಾಬೀತಾಯ್ತು. ಆದರೆ ಹೋದ ಮಾನ ವಾಪಸ್ಸು ಬಂತಾ ? ಇದೇ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಸದನಕ್ಕೆ ಹೋಗಲು ನನಗೆ ಬೇಜಾರಾಗುತ್ತಿದೆ ಎಂದು ಹೇಳಿದ ಸಚಿವ ಸೋಮಶೇಖರ್ ನನಗೆ ಸದನಕ್ಕೆ ಹೋಗಲು ನೋವಾಗುತ್ತಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಆದರೆ ಬೇಡದ ವಿಚಾರಗಳಿಗೆ ಸಮಯ ಮೀಸಲುಗುತ್ತಿದೆ. ಆದರೆ ಪ್ರಜಾಪ್ರಭುತ್ವ ಇμÉ್ಟೀ ಅನ್ನುವಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ನೈತಿಕತೆ ಅನೈತಿಕತೆ ಪಾಠ ಹೇಳಬೇಡಿ. ನಿಮ್ಮ ಅನೈತಿಕತೆಯಿಂದಲೇ ಸಮ್ಮಿಶ್ರ ಸರ್ಕಾರ ಬಿದ್ದಿದ್ದು. ಮುಂಚೆಯಿಂದಲೂ ನಿಮಗೆ ನೈತಿಕತೆ ಇಲ್ಲ. ನೈತಿಕತೆ ಇಲ್ಲದ ನೀವು ನನ್ನನ್ನು ಏಕೆ ಕೇಳುತ್ತೀರಿ ? ಎಂದರು ಸೋಮಶೇಖರ್.

