ಊಟಿಯಲ್ಲಿ ಬಿಜೆಪಿ ಪರ ಎಸ್ ಟಿ ಎಸ್ ಬಿರುಸಿನ ಪ್ರಚಾರ

ಉದಗಮಂಡಲಂ, ಊಟಿ: ತಮಿಳುನಾಡಿನಲ್ಲೂ ಬಿಜೆಪಿ ಅಲೆ ಎಬ್ಬಿಸುವ ನಿಟ್ಟಿನಲ್ಲಿ ಅಖಾಡಕ್ಕೆ ಇಳಿದಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಮ್ಮ ತಂಡದೊಂದಿಗೆ ಉದಗಮಂಡಲಂ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯತಂತ್ರವನ್ನು ಹೆಣೆಯುತ್ತಿದ್ದು, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಚುನಾವಣೆ ಎಂದರೆ ಅಬ್ಬರದ ಪ್ರಚಾರ, ಭಾಷಣ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನ ಕೂಗಿಗೆ ಓಗೊಡುವುದು, ಆತನಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಚಾರ ತಂತ್ರಗಳನ್ನು ಹೆಣೆದಿರುವ ಅನುಭವಿ ರಾಜಕಾರಣಿ ಎಸ್.ಟಿ.ಸೋಮಶೇಖರ್ ಅವರು, ಪ್ರತಿ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದಾರೆ. ಇದರ ಜೊತೆ ಜೊತೆಗೆ ಮತದಾರರ ಅಂತರಾಳವನ್ನು ಅರಿಯುವ ಹಾಗೂ ಅವರಿಗೆ ಬಿಜೆಪಿಯ ಸಾಧನೆಯನ್ನು ಮುಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಬೋಜರಾಜನ್ ಅವರ ಜೊತೆಗೂಡಿ ಉದಗಮಂಡಲಂ ಕ್ಷೇತ್ರದ ಹಲವು ಕಡೆ ಪ್ರಚಾರಕ್ಕೆ ಇಳಿದಿರುವ ಸಚಿವ ಎಸ್.ಟಿ. ಸೋಮಶೇಖರ್ ಅವರ ಜೊತೆಗೆ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಹಾಗೂ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಸಾಥ್ ಕೊಟ್ಟಿದ್ದಾರೆ.
ಉದಗಮಂಡಲಂನ ಪ್ರಮಖ ಬಿಷಪ್ ರನ್ನು ಭೇಟಿ ಮಾಡಿದ ಸೋಮಶೇಖರ್ ಅವರು, ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಸದಾ ತಮ್ಮ ಸಲಹೆಗಳನ್ನು ಸ್ವೀಕರಿಸಲು ಪಕ್ಷ ಹಾಗೂ ಪಕ್ಷದ ಅಭ್ಯರ್ಥಿ ಬದ್ಧವಿರುವುದಾಗಿ ಮನದಟ್ಟು ಮಾಡಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಬಿಷಪ್ ಅವರು, ಅಭ್ಯರ್ಥಿ ಬೋಜರಾಜನ್ ಅವರಿಗೆ ಶುಭಹಾರೈಸಿದರು.
ಇದಲ್ಲದೆ, ಒಕ್ಕಲಿಗರ ಸಂಘ, ಟ್ರೇಡರ್ಸ್ ಅಸೋಸಿಯೇಷನ್, ಮಲೆಯಾಲಿ ಸಮುದಾಯವರ ಜೊತೆ ಜೊತೆಗೆ ಸಣ್ಣ ಪುಟ್ಟ ಸಮುದಾಯದ ನಾಗರಿಕರು ಮುಖಂಡರನ್ನು ಭೇಟಿ ಮಾಡಿ ಅವರ ಸಮಸ್ಯೆಗಳ ಬಗ್ಗೆ ಅರಿಯಲಾಯಿತು. ಜೊತೆಗೆ ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿ ಬಿಜೆಪಿ ಅಭ್ಯರ್ಥಿಯು ಗೆಲುವು ಸಾಧಿಸಿದರೆ ಕ್ಷೇತ್ರದ ಅಭಿವೃದ್ಧಿ ಇನ್ನಷ್ಟು ಹೆಚ್ಚುತ್ತದೆ ಎಂಬುದನ್ನೂ ಈ ಸಂದರ್ಭದಲ್ಲಿ ಸಚಿವ ಸೋಮಶೇಖರ್ ಅವರು ಕರ್ನಾಟಕದ ಸಾಧನೆಗಳನ್ನು ವಿವರಿಸುವ ಮೂಲಕ ಮನದಟ್ಟು ಮಾಡುವ ಪ್ರಯತ್ನವನ್ನು ಮಾಡಿದರು.
ಬಿಜೆಪಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಜನರು ಹಾಗೂ ವಿವಿಧ ಸಮುದಾಯಗಳ ಮುಖಂಡರಿಂದ ಉತ್ತಮ ಪ್ರತಿಕ್ರಿಯೆ ಇದೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ನೂರಕ್ಕೆ ನೂರು ಶ್ರಮ ಹಾಕುತ್ತೇವೆ ಎಂದರು.
ಈಗ ಉದಗಮಂಡಲಂ ಕ್ಷೇತ್ರದಲ್ಲಿರುವ ಹಾಲಿ ಶಾಸಕರು ಯಾವುದೇ ರೀತಿಯ ಕೆಲಸ ನಿರ್ವಹಿಸದೇ ಇರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ಕೋವಿಡ್-19ರ ಸಂಕಷ್ಟ ಕಾಲದಲ್ಲಿ ಬಿಜೆಪಿ ಕಾರ್ಯಕರ್ತರು ಈ ಭಾಗದ ಪ್ರತಿ ಮನೆಗಳಿಗೆ ಭೇಟಿ ನೀಡಿ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಈ ಋಣವನ್ನು ನಾವೀಗ ತೀರಿಸುತ್ತೇವೆಂಬ ಮಾತು ಮತದಾರರಿಂದ ಕೇಳಿ ಬರುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಊಟಿಯನ್ನು ಹೇಗೆಲ್ಲ ಅಭಿವೃದ್ಧಿ ಮಾಡಬಹುದು? ಪ್ರವಾಸೋದ್ಯಮ ದೃಷ್ಟಿಯಿಂದ ಹಾಗೂ ಸ್ಥಳೀಯ ಜನತೆ ದೃಷ್ಟಿಯಿಂದ ಯಾವ ರೀತಿ ಅನುಕೂಲವನ್ನು ಮಾಡಿಕೊಡಬೇಕೆಂಬ ದೂರದೃಷ್ಟಿ ಕಲ್ಪನೆಯನ್ನು ನಮ್ಮ ಅಭ್ಯರ್ಥಿ ಬೋಜರಾಜನ್ ಅವರಿಗಿದ್ದು, ಅವರು ಈ ಬಾರಿ ಗೆಲುವು ಸಾಧಿಸಲಿದ್ದಾರೆಂದು ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಅಭ್ಯರ್ಥಿಯಾಗಿರುವ ಬೋಜರಾಜನ್ ಅವರು ಹಿರಿಯರು ಹಾಗೂ ಅನುಭವಿಗಳು, ಅವರ ಬಗೆಗೆ ಈ ಭಾಗದಲ್ಲಿ ಜನರಿಂದ ಉತ್ತಮ ಅಭಿಪ್ರಾಯವಿದೆ. ಈಗಾಗಲೇ ಹಲವಾರು ಗ್ರಾಮಗಳಿಗೆ ಸಚಿವರಾದ ಸೋಮಶೇಖರ್ ಅವರ ನೇತೃತ್ವದಲ್ಲಿ ಭೇಟಿ ಕೊಟ್ಟಿದ್ದೇವೆ. ಇದೀಗ ಕೊತ್ತಗಿರಿ ಗ್ರಾಮಕ್ಕೆ ಬಂದಿದ್ದೇವೆ. ಹೀಗೆ ಪ್ರತಿ ಹಳ್ಳಿ, ಮನೆ ಮನೆಗಳಿಗೆ ಭೇಟಿ ಕೊಟ್ಟು ಮತದಾರರನ್ನು ಸೆಳೆಯುವ ಕೆಲಸವನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ಎಐಡಿಎಂಕೆಯಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದು ತಿಳಿಸಿದರು.