ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅವರ ನೇಮಕ

ನವದೆಹಲಿ: ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಾಧೀಶರಾದ ಎನ್ ವಿ ರಮಣ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಅವರ ಶಿಫಾರಸ್ಸಿನಂತೆ ಭಾರತದ ಸುಪ್ರೀಂ ಕೋರ್ಟ್‍ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅವರ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅನುಮೋದನೆ ನೀಡಿದ್ದಾರೆ.
ಇದೇ ಏ. 23ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರು ನಿವೃತ್ತಿಯಾಗಲಿದ್ದಾರೆ. ಏ. 24ರಿಂದ ರಮಣ ಅವರು ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನ್ಯಾಯಮೂರ್ತಿ ರಮಣ ಅವರ ಸೇವಾವಧಿ 2022, ಆಗಸ್ಟ್ 26ರವರೆಗೂ ಇದೆ.
ಹಾಲಿ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವ ಮುನ್ನ ಉತ್ತರಾಧಿಕಾರಿ ಹೆಸರನ್ನು ಸೂಚಿಸುವುದು ಸಂಪ್ರದಾಯ. ಹಾಗೆಯೇ, ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದೂ ಕೂಡ ಸಾಂಪ್ರದಾಯ. ನ್ಯಾ| ಎನ್ ವಿ ರಮಣ ಅವರೇ ಸುಪ್ರೀಂ ಕೋರ್ಟ್‍ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ.
ಹೀಗಾಗಿ ಎನ್ ವಿ ರಮಣ ಅವರನ್ನು ಮುಂದಿನ ಸಿಜೆಐ ಆಗಿ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರು ಶಿಫಾರಸ್ಸು ಮಾಡಿದ್ದರು.