ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಯುಗ ಯುಗಾದಿ ಕಳೆದರೂ, ಯಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ.
ಭಾರತೀಯ ಸಂಸ್ಕøತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಸಾಂಸ್ಕೃತಿಕ ಮಹತ್ವವಿದೆ.
ಅದರಲ್ಲೂ ದಕ್ಷಿಣ ಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸ ವರುಷದ ದಿನವು ಯುಗಾದಿಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ.
ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ, ಕೇರಳದಲ್ಲಿ ವಿಶು ಅಂತಲೂ ಮಹಾರಾಷ್ಟ್ರದಲ್ಲಿ ಗುಡಿ ಪದ್ವ ಎಂಬ ಹೆಸರಿನಿಂದ ಆಚರಣೆ ಮಾಡಲಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು.
ಗ್ರಾಮೀಣರ ಆಡುಮಾತಿನಲ್ಲಿ ಹೇಳುವುದಾದರೆ, ಯುಗಾದಿಯು “ಉಗಾದಿ” ಎನಿಸಿಕೊಳ್ಳುತ್ತದೆ. ಉಗಾದಿ ಹಬ್ಬವು ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ.
ಯುಗಾದಿ ಹಬ್ಬದ ಹಿನ್ನೆಲೆ: ಯುಗಾದಿಯ ಅರ್ಥ ಯುಗದ ಆದಿ. ಯುಗಾದಿ ಎಂಬ ಶಬ್ದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳಿಂದ ಕೂಡಿದೆ.
ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ; ಆದಿ ಎಂದರೆ ಆರಂಭ. ಯುಗಾದಿ ತತ್ಸಮ ಪದವಾದರೆ ಉಗಾದಿ ತದ್ಭವ, ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ.
ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.
ಮಹಾ ವಿಷ್ಣುವಿನ ಹಲವಾರು ಹೆಸರುಗಳಲ್ಲಿ ಯುಗಾದಿ ಕೂಡ ಒಂದು. ಭಗವಾನ್ ವಿಷ್ಣುವನ್ನು ಯುಗಗ್ರೀಕ ಎಂದು ಹೇಳಲಾಗುತ್ತದೆ. ಅಂದರೆ ಯುಗದ ಸೃಷ್ಟಿಕರ್ತ. ಆದ್ದರಿಂದ ಭೂಮಿಯ ಸೃಷ್ಟಿಕರ್ತನಾದ ಬ್ರಹ್ಮನನ್ನು ಪೂಜಿಸಲು ಈ ದಿನ ಅತ್ಯಂತ ಶುಭ ದಿನವಾಗಿದೆ.
ರಾವಣಾದಿಗಳನ್ನು ಸಂಹರಿಸಿ ವನವಾಸದಿಂದ ಮರಳಿ ಬಂದ ನಂತರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ನಿಜ ಪಟ್ಟಾಭಿμÉೀಕವಾದದ್ದು ಇದೇ ದಿನ ಎಂಬುದಾಗಿ ನಂಬಲಾಗಿದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಕ್ರಿ.ಪೂ 18.02.3102ಕ್ಕೆ ಅನುಗುಣವಾದ ಚೈತ್ರದ ಪ್ರಕಾಶಮಾನವಾದ ಹದಿನೈದನೆಯ ಮುಂಜಾನೆ ಶ್ರೀ ಕೃಷ್ಣನ ನಿರ್ಯಾಣವನ್ನು ಪ್ರಾರಂಭಿಸದನು ಎಂದು ಪರಿಗಣಿಸಲಾಗಿದೆ.
ಈ ದಿನವು ಕಲಿಯುಗದ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಯುಗಾದಿಯನ್ನು ಕಲಿಯುಗದ ಆರಂಭ ಎಂದು ನಂಬಲಾಗಿದೆ.
ದಕ್ಷಿಣ ಭಾರತವನ್ನು ಆಳಿದ್ದ ಪ್ರಸಿದ್ಧ ಅರಸ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದೇ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ.
ಯುಗಾದಿಯು ಚಂದ್ರಮಾನದ ಸಂವತ್ಸರದ ಆರಂಭದ ದಿನ.
ವರಾಹಮಿಹಿರಾಚಾರ್ಯನು ವμರ್Áರಂಭವನ್ನು ಚೈತ್ರ ಮಾಸವೆಂದು ಹೇಳಿರುವನು.
ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತೀಶ್ರೇಷ್ಠ ಮೂಹೂರ್ತ ಎಂದು ಭಾರತಿಯರು ನಂಬುತ್ತಾರೆ.
ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು.
ಯಗಾದಿಯ ಮಹತ್ವ: ಉತ್ತರ ಗೋಳಾರ್ಧವು 21 ದಿನಗಳವರೆಗೆ ಗರಿಷ್ಠ ಸೂರ್ಯನ ಕಿರಣಗಳನ್ನು ಪಡೆಯುವ ರೀತಿಯಲ್ಲಿ ಭೂಮಿಯು ಈ ದಿನದಂದು ಚಲಿಸುತ್ತದೆ.
ಭೂಮಿಯ ಮೇಲಿನ ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಋತುವನ್ನು ಹಸಿರು ಮತ್ತು ಎಲೆಗಳು ಮತ್ತು ತಾಜಾ ಗಾಳಿಯ ಋತುಮಾನ ಎಂದೂ ಕರೆಯಲಾಗುತ್ತದೆ. ಈ ಸಮಯದಲ್ಲಿ ಹೊಸ ಎಲೆಗಳು ಮತ್ತು ಹೂವುಗಳು ಅರಳುತ್ತವೆ ಮತ್ತು ಹಣ್ಣುಗಳು ಮೊಗ್ಗುಗಳನ್ನು ಬಿಡಲು ಪ್ರಾರಂಭಿಸುತ್ತವೆ. ಈ 21 ದಿನಗಳ ಪರಿವರ್ತನೆಯು ಭೂಮಿಗೆ ಚೈತನ್ಯ ನೀಡುತ್ತದೆ ಮತ್ತು ಮುಂಬರುವ ವರ್ಷಕ್ಕೆ ಅದನ್ನು ಮತ್ತೆ ಸಿದ್ಧಪಡಿಸುತ್ತದೆ.
ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ.
ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.
ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ನಾವು ಬೇವಿನ ಸಮಾನವಾದ ದು:ಖ, ಅಶಾಂತಿಯ, ಪ್ರಪಂಚದಲ್ಲಿದ್ದರೂ ಬೆಲ್ಲದ ಸಮಾನವಾದ ಶಾಂತಿ, ಅತೀಂದ್ರಿಯ ಸುಖ, ಆತ್ಮೀಯತೆ, ಸ್ನೇಹ, ಮಧುರತೆಯ ಅನುಭವ ಮಾಡುವುದು ಎಂಬ ನಿಜ ಅರ್ಥವಾಗಿದೆ.
ಬೇವಿನ ಎಲೆಯೂ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದು.
||ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ||
||ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಂ|| ಎಂದು ಆಯುರ್ವೇದವು ಬೇವಿನ ಮಹಿಮೆಯನ್ನು ಸಾರಿದೆ.
ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು. ಎಲ್ಲಾ ರಾಶಿಗಳ ಫಲಾಫಲಗಳನ್ನು ವಿವರಿಸುವರು. ಪ್ರತಿವರ್ಷದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು.
ಪಂಚಾಂಗ ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅμÉ್ಟೀ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇರುವವು.
ಕೂಡಿ ಬಾಳಿದರೆ ಸ್ವರ್ಗಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ.
ಅಲ್ಲದೆ, ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ, ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ.
ಆ ಮೂಲಕ ಸ್ವರ್ಗಕ್ಕೆ ಕಿಚ್ಚುಹಚ್ಚುತ್ತಾ ಬಾಳುವೆ ನಡೆಸಬೇಕು. ಸುಖಜೀವನ ನಡೆಸುವುದೇ ಸ್ವರ್ಗದ ಹೋಲಿಕೆಗಿರುವ ಮತ್ತೊಂದು ಶಬ್ದ. ಇಂತಹ ಉತ್ತಮೋತ್ತಮ ನಡೆ, ಗುಣಗಳನ್ನು, ಬಿತ್ತುವುದಕ್ಕೆ ಯುಗಾದಿ ನಾಂದಿಯಾಗಲಿದೆ. ಜನರಲ್ಲಿ ಹಳತಾದುದರ ಕೊನೆಯೇ ಹೊಸತನಕ್ಕೆ ಆರಂಭ.
ನಾವು ಯಾವುದೇ ಹೊಸದು ಬಂದಮೇಲೆ ಹಳೆಯದರ ಕುರಿತು ಅಸಡ್ಡೆ ಹೊಂದುವುದು ಸಾಮಾನ್ಯ. ಆದರೆ, ಹೊಸತಾದುದು ಬರಲು ಹಳೆಯದು ಅವಕಾಶ ಮಾಡಿಕೊಡದಿದ್ದರೆ ಹೊಸದು, ಹೊಸತನ ಬರಲು ಹೇಗೆ ಸಾಧ್ಯ? ಆದುದರಿಂದ ಹೊಸತನದ, ಹೊಸದರ ಆರಂಭವಾಗಲು ಹಳೆಯದರ ಪಾಲು, ಸಹಾಯ, ಸಹಕಾರ ಪ್ರಮುಖವಾಗಿದೆ. ಹಾಗಾಗಿ, ಹೊಸತು-ಹಳತು ಎಂಬುವು ಪ್ರಕೃತಿಯ ಬದಲಾವಣೆಯ ಎರಡು ಮುಖಗಳು.
ಚಾಂದ್ರಮಾನ ಇರಲಿ ಅಥವಾ ಸೌರಮಾನವೇ ಇರಲಿ ಯುಗಾದಿಯು ವಸಂತ ಋತುವಿನ ಆಗಮನ ಕಾಲದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ.
ವಸಂತ ಕಾಲವೆಂದರೆ ಹೊಸ ಚಿಗುರುಗಳು ಮೊಳೆಯುವ ಕಾಲ, ಹೊಸ ಮೊಗ್ಗುಗಳು ಮೂಡುವ ಕಾಲ, ಸಸ್ಯಗಳು ಫಲ ಬಿಡುವ ಕಾಲವಾಗಿದೆ. ಆದ್ದರಿಂದ ಈ ಹಬ್ಬವು ಹೊಸ ಯುಗದ ಹುಟ್ಟನ್ನು ಸೂಚಿಸುತ್ತದೆ. ಹೀಗಾಗಿ ಈ ಯುಗಾದಿ ಹಬ್ಬವು ಈ ನಾಡಿಗೆ, ಜನರಿಗೆ ಸಮೃದ್ಧಿಯನ್ನು ತರಲಿ ಎಂದು ಹೇಳುತ್ತಾ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

