ಚಿಕ್ಕಬಳ್ಳಾಪುರ: ಕೋವಿಡ್ ನಿಂದ ಜನತೆ ಒದ್ದಾಡುತ್ತಿದ್ದರೆ ಇತ್ತ ಸುರಿದ ಗಾಳಿ ಮಿಶ್ರಿತ ಆಲಿಕಲ್ಲು ಮಳೆಗೆ ರೈತ ಕಣ್ಣೀರು ಹಾಕುವಂತೆ ಮಾಡಿದೆ.
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಆಲಿಕಲ್ಲು ಮಳೆ ಜನರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಇಲ್ಲಿ ಬಿದಿದ್ದು ಸಣ್ಣ ಪುಟ್ಟ ಆಲಿಕಲ್ಲುಗಳಲ್ಲ. ಸೈಜುಗಲ್ಲುಗಳಂತೆ ಆಕಾಶದಿಂದ ಬೀಳುತ್ತಿದ್ದ ಆಲಿಕಲ್ಲುಗಳನ್ನು ಕಂಡು ಇಲ್ಲಿನ ಜನತೆ ಆವಾಕ್ಕಾದರು.
ಸುಮಾರು 5ರಿಂದ 6 ಕೆಜಿ ತೂಕದ ಸೈಜುಗಲ್ಲುಗಳ ರೀತಿಯ ಆಲಿಕಲ್ಲುಗಳು ಬಿದ್ದಿದ್ದು, ಇದರಿಂದ ಜೀವಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.
ಜನರಂತೂ ಆ ಆಲಿಕಲ್ಲುಗಳನ್ನು ಕಂಡು ಬೆರಗಾಗಿದ್ದಾರೆ.
ಶಿಡ್ಲಘಟ್ಟದಲ್ಲಿ ಬಿರುಗಾಳಿ ಸಮೇತ ಆಲಿಕಲ್ಲು ಮಳೆಯಾಗಿದ್ದು, ದ್ರಾಕ್ಷಿ ಚಪ್ಪರಗಳೆಲ್ಲ ನೆಲಕ್ಕುರಳಿವೆ. ಪಾಲಿಹೌಸ್ ಗಳು ನೆಲಕಚ್ಚಿವೆ.
ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ.
ಮಳೆಯ ರಭಸಕ್ಕೆ ಬಹುತೇಕ ಜಿಲ್ಲೆಯ ಎಲ್ಲಡೆ ಕೃಷಿ ಬೆಲೆಗಳು ಸರ್ವನಾಶವಾಗಿವೆ. ಬಾಗೇಪಲ್ಲಿ ತಾಲ್ಲೂಕಿನ ಗೂಳೂರು, ಪಾತಪಾಳ್ಯ ಸೇರಿದಂತೆ ತಾಲೂಕಿನಾದ್ಯಂತ ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ವರುಣ ಬಿಸಿಲಿನಿಂದ ಕಂಗೆಟ್ಟಿದ್ದ ಭೂಮಿಗೆ ತಂಪರೆದ.
ಏಕಾಏಕಿ ಮಳೆರಾಯನ ಅಬ್ಬರಕ್ಕೆ ಜನತೆ ಕಂಗಾಲಾಗಿದ್ದರು.
ಚಿಕ್ಕಬಳ್ಳಾಪುರದಲ್ಲೂ ಮಳೆ ಬಿದ್ದಿತಾದರೂ ಪಕ್ಕದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಳೆ ಭೀಭತ್ಸ ಸೃಷ್ಟಿ ಮಾಡಿದೆ. ಕೆಲವೆಡೆ ಅಬ್ಬರದ, ಜೋರು ಮಳೆಯಾಯಿತಾದರೂ, ಬಶೆಟ್ಟಹಳ್ಳಿ ಹೋಬಳಿ, ದೊಡ್ಡಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಮಾತ್ರ ಸುರಿದ ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆಗೆ ಪಾಲಿಹೌಸ್ ಗಳು ಹಾರಿ ಹೋದವು. ಪಾಲಿಹೌಸ್ ಗಳ ಹೊದಿಕೆ ಹರಿದು ಹಂಚಿ ಅದರೊಳಗಡೆಯಿದ್ದ ಕ್ಯಾಪ್ಸಿಕಂ ಸೇರಿದಂತೆ ನಾನಾ ಬಗೆಯ ತರಕಾರಿ ಹೂವುಗಳು ಕೊಚ್ಚಿಕೊಂಡು ಹೋದವು.
ದ್ರಾಕ್ಷಿ ಚಪ್ಪರಗಳು ನೆಲಕ್ಕುರುಳಿದವು. ಈ ಬೆಳೆಗಳ ನಷ್ಟದಿಂದ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ.
ಬಿರುಗಾಳಿ ಆಲಿಕಲ್ಲು ಮಳೆಗೆ ಬಶೆಟ್ಟಹಳ್ಳಿ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ಪಾಲಿಹೌಸ್ ಗಳು, ನಾಲ್ಕು ದ್ರಾಕ್ಷಿ ತೋಟಗಳು, ನೂರಾರು ರೈತರ ತೋಟದಲ್ಲಿನ ನಾನಾ ತರಕಾರಿ ಹೂವು, ಹಿಪ್ಪುನೇರಳೆ ದನಕರುಗಳ ಮೇವು ಕೊಚ್ಚಿಹೋಗಿದೆ.
ಮಳೆ ನಿಂತ ಮೇಲೆ ತೋಟಗಳತ್ತ ಬಂದ ರೈತರು ಬೆಳೆ ನೆಲದ ಪಾಲಾಗಿರುವುದನ್ನು ಕಂಡು ದಿಗ್ಭ್ರಮೆಗೊಂಡರು.
ದಾಕ್ಷಿ ಚಪ್ಪರಗಳಲ್ಲಿ ಫಸಲು ಕೈಗೆ ಬರುವುದರಲ್ಲಿತ್ತು. ಪಾಲಿಹೌಸ್‍ಗಳಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದ ರೈತರು ತಲೆ ಮೇಲೆ ಕೈಹೊತ್ತು ಕೂತರು.
ಕೆಲ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದು, ಬಹುತೇಕರು ಮಾಡಿಸಿಲ್ಲ ಎನ್ನಲಾಗಿದೆ.
ಬೆಳೆ ನಷ್ಟದಿಂದ ರೈತರು ಕಣ್ಣೀರು ಹಾಕಿದ್ದಾರೆ.


