ಕೆಲ ಕೋವಿಡ್ ಕೇರ್ ಸೆಂಟರ್ ಬಂದ್ ನಿಂದ ಡಿಸಿ ವಿರುದ್ಧ ಬಿಜೆಪಿಗರು ಗರಂ -ಎಂ. ಲಕ್ಷ್ಮಣ್

ಮೈಸೂರು: ಮೈಸೂರಿನಲ್ಲಿ ಕೆಲ ಕೋವಿಡ್ ಕೇರ್ ಸೆಂಟರ್ ಗಳನ್ನು ಜಿಲ್ಲಾಧಿಕಾರಿ ಬಂದ್ ಮಾಡಿಸಿದ್ದರಿಂದ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ನಗರದಲ್ಲಿ ಮಂಗಳವಾರ ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಖಾಸಗಿ ಕೋವಿಡ್ ಸೆಂಟರ್ ಗಳು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಕೋವಿಡ್ ಸೆಂಟರ್ ಬಂದ್ ಮಾಡಿಸಿದರು. ನಗರದಲ್ಲಿ ಕೆಲವೆಡೆ ಡಿಎಚ್‍ಓ ಅನುಮತಿ ಇಲ್ಲದೆ ಕೆಲವು ಕೋವಿಡ್ ಸೆಂಟರ್‍ಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ಕೋವಿಡ್ ಸೆಂಟರ್ ನಿಂದ ಬಿಜೆಪಿಯವರಿಗೆ ಹಣ ಸಂದಾಯವಾಗುತ್ತಿತ್ತು. ಜಿಲ್ಲಾಧಿಕಾರಿಗಳು ಈ ಕೇಂದ್ರಗಳನ್ನು ಮುಚ್ಚಿಸಿದ್ದರಿಂದ ಕೆಲ ಬಿಜೆಪಿಗರ ಆದಾಯಕ್ಕೆ ಧಕ್ಕೆ ಉಂಟಾಯಿತು. ಇದರಿಂದ ಅಸಮಾಧಾನಗೊಂಡ ಬಿಜೆಪಿ ನಾಯಕರು ಜಿಲ್ಲಾಧಿಕಾರಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂದು ಅವರು ತಿಳಿಸಿದರು.
ಆಕ್ಸಿಜನ್ ದರ ಹಿಂದೆ ಎಷ್ಟಿತ್ತು ? ಈಗ ಎಷ್ಟಾಗಿದೆ ? ಇದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆಯಾ ? ಎಂದು ಲಕ್ಷ್ಮಣ್ ಪ್ರಶ್ನಿಸಿ, ನೀವು ಸರ್ಕಾರಿ ಆಸ್ಪತ್ರೆ ಮೇಲೆ ಗಮನವಹಿಸುತ್ತಿಲ್ಲ. ಕೇವಲ ಖಾಸಗಿ ಆಸ್ಪತ್ರೆ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದೀರಾ ಎಂದು ಲಕ್ಷ್ಮಣ್ ದೂರಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ರಚಿಸಿರುವ ಕೋವಿಡ್ ಟಾಸ್ಕ್ ಫೆÇರ್ಸ್ ಗೆ ಮಾನ್ಯತೆ ಇಲ್ಲ. ಸರ್ಕಾರದ ಯಾವ ನಿಯಮವನ್ನು ಪಾಲಿಸುತ್ತಿಲ್ಲ. ಇದಕ್ಕೆ ಸರ್ಕಾರದ ನೋಟಿಫಿಕೇಷನ್ ಎಲ್ಲಿದೆ ? ಈ ಎಲ್ಲಾ ಟಾಸ್ಕ್ ಪೆÇೀರ್ಸ್‍ನಲ್ಲಿ ಜಿಲ್ಲಾಧಿಕಾರಿ ಏಕೆ ಇಲ್ಲ ಎಂದು ಕಾಂಗ್ರೆಸ್ ಲಕ್ಷ್ಮಣ್ ಪ್ರಶ್ನಿಸಿದರು.
ಕೊರೊನಾ ಎರಡನೇ ಅಲೆಯಲ್ಲಿ 5 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಜಿಲ್ಲಾವಾರು ಇದನ್ನು ಹಂಚಿಕೊಂಡಿದ್ದಾರೆ ಎಂದು ಲಕ್ಷ್ಮಣ್ ಆರೋಪ ಮಾಡಿದರು.