ಬೆಂಗಳೂರು: ಕೋವಿಡ್ 19ರ ಸಂದರ್ಭದಲ್ಲಿ ಜನತೆ ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹವರಿಗೆ ಚಿಕಿತ್ಸೆ ಜೊತೆ ಧೈರ್ಯ ತುಂಬುವ ಕೆಲಸವನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾಡುತ್ತಿದ್ದು, ತಮ್ಮ ಕ್ಷೇತ್ರದಲ್ಲಿ ಮೃತಪಟ್ಟವರಿಗೆ 1 ಲಕ್ಷ ರೂ.ವನ್ನು ವೈಯಕ್ತಿಕವಾಗಿ ನೀಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ 198ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವ ಎಸ್.ಟಿ. ಸೋಮಶೇಖರ್ ಅವರು ಕೋವಿಡ್ 19ರಿಂದ ಮೃತಪಟ್ಟ 24 ಕುಟುಂಬದವರಿಗೆ ವೈಯಕ್ತಿಕವಾಗಿ ನೀಡಲಿರುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಐವರು ಕೋವಿಡ್ ಸೋಂಕಿತರಿಗೆ ಆರ್ಥಿಕ ಧನಸಹಾಯ ಕಾರ್ಯಕ್ರಮಕ್ಕೆ ಶ್ರೀ ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿ ರವರು ಬುಧವಾರ ಚಾಲನೆ ನೀಡಿ ಮಾತನಾಡಿದರು.
ಸಚಿವ ಸೋಮಶೇಖರ್ ಅವರು ಮಾತು ಕಡಿಮೆ, ಕೆಲಸ ಜಾಸ್ತಿ ಎಂಬ ಪ್ರವೃತ್ತಿಯವರು. ಹೀಗಾಗಿ ಕಡಿಮೆ ಮಾತನಾಡಿ, ಹೆಚ್ಚು ಕೆಲಸವನ್ನು ಮೌನದಿಂದಲೇ ಮಾಡುತ್ತಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿದರು.
ಕಳೆದ ವರ್ಷ ಬಂದ ಕೊರೋನಾದಿಂದ ಜನತೆಗೆ ಅμÉ್ಟೂಂದು ಪರಿಣಾಮ ಬೀರಿರಲಿಲ್ಲ. ಆಗ ಜನರು ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮುಖಾಂತರ ತಹಬದಿಗೆ ಬರುವಲ್ಲಿ ಕಾರಣರಾದರು. ಆದರೆ ಈಗ ಕೊರೋನಾದಿಂದ ಏನೂ ಆಗಲ್ಲ ಎಂಬ ಭಾವನೆ ಜನರಲ್ಲಿ ಬಂದು ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇಂದು ಸೋಂಕಿತರ ಸಂಖ್ಯೆ ಉಲ್ಬಣಿಸಿದೆ. ಇದಾಗಬಾರದು, ಎಲ್ಲರೂ ಸುರಕ್ಷಿತವಾಗಿರಿ ಎಂದು ಮಹಾಸ್ವಾಮೀಜಿಗಳು ಕಿವಿ ಮಾತು ಹೇಳಿದರು.
ಹಳ್ಳಿಗಳಲ್ಲಿಯೂ ಕೊರೋನಾ ಬಂದರೆ ಗುಟ್ಟಾಗಿ ಇಟ್ಟುಕೊಳ್ಳದೆ, ಸೂಕ್ತ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಬೇಕು ಎಂದು ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿಗಳು ತಿಳಿಸಿದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, ನಾವೀಗ ಕ್ಷೇತ್ರದಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಲಕ್ಷಣಗಳು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಮನವೊಲಿಸಲು ನಾನೂ ಸಹ ಖುದ್ದು ಮುಂದಾಗಿದ್ದೇನೆ. ಜನರ ಆರೋಗ್ಯ ನಮಗೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿದ್ದೇವೆ ಎಂದು ತಿಳಿಸಿದರು.

