ಮೈಸೂರು: ಕೊರೊನಾ ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಸೆಂಟರ್ ಗೆ ಬರಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪಾಸಿಟಿವ್ ಆದವರು ಆಸ್ಪತ್ರೆ ಅಥವಾ ಕೋವಿಡ್ ಸೆಂಟರ್ ಗೆ ಬರದಿದ್ದರೆ ಬಲವಂತವಾಗಿ ಕರೆದುಕೊಂಡು ಬರಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.
ಹೋಂ ಐಸೋಲೇಷನ್ ನ್ನು ಕಡ್ಡಾಯವಾಗಿ ರದ್ದು ಮಾಡುತ್ತೇವೆ. ಯಾರೇ ಆಗಲಿ ಕೊರೊನಾ ಪಾಸಿಟಿವ್ ಬಂದ ಮೇಲೆ ಆಸ್ಪತ್ರೆ ಅಥವಾ ಕೋವಿಡ್ ಸೆಂಟರ್ ಬರಬೇಕು. ಇನ್ನು ಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದರು.
ಕೊರೊನಾ ನಿಯಂತ್ರಣಕ್ಕಾಗಿ ಟಾಸ್ಕ್ ಫೆÇೀರ್ಸ್ ರಚನೆ ಕಾನೂನು ಬಾಹಿರ ಎಂಬ ಕಾಂಗ್ರೆಸ್ಸಿಗರ ಆರೋಪ ಕುರಿತು ಪ್ರತಿಕ್ರಿಯಿಸಿ ಇದು ಜನಪ್ರತಿನಿಧಿಗಳಿಗೆ ಟಿಎಡಿಎ, ಕಾರು ಕೊಡುವಂತಹ ಹುದ್ದೆಯಲ್ಲ. ಇದು ಕೊರೊನಾ ನಿಯಂತ್ರಿಸುವ ಸಲುವಾಗಿ ನಾವೇ ಸೇವೆ ಸಲ್ಲಿಸಲು ಮಾಡಿಕೊಂಡಿರುವ ಟಾಸ್ಕ್ ಫೆÇೀರ್ಸ್. ಆಡಳಿತದಲ್ಲಿ ವೈಫಲ್ಯ ಕಂಡಾಗ ನಾವು ತೆಗೆದುಕೊಂಡಿರುವ ನಿರ್ಧಾರ ಇದು ಎಂದು ಹೇಳಿದರು. ಜನ ಪ್ರತಿನಿಧಿಗಳು ಜನರಿಗಾಗಿ ದುಡಿಯುವ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆ ಕಾರಣಕ್ಕೆ ನಾವೇ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಕೊರೊನಾಗೆ ಕಡಿವಾಣ ಹಾಕಲು, ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದೇವೆ ಎಂದರು.
ಪಿಎಂ ಕೇರ್‍ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ. ನಿಮಿಷಕ್ಕೆ 1000 ಕೆಎಲ್ ಆಕ್ಸಿಜನ್ ಉತ್ಪಾದಿಸುವ ಯೂನಿಟ್ ಇದಾಗಿದ್ದು, ಅದನ್ನ ಕೆ.ಆರ್.ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗುವುದು ಎಂದರು.
ಇನ್ನೊಂದು ತಿಂಗಳಲ್ಲಿ ಮೈಸೂರಿನ ಎಲ್ಲ ತಾಲೂಕಿನಲ್ಲೂ ಆಕ್ಸಿಜನ್ ಜನರೇಟರ್ ಯೂನಿಟ್ ಅಳವಡಿಸಲಾಗುವುದು. ಮುಂದಿನ ತಿಂಗಳಿನಿಂದ ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆ ಇರುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೋವಿಡ್ ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು ಹರಡಲು ಕಾರಣವಾಯಿತು. ಇದನ್ನ ಮುಕ್ತವಾಗಿ ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ. ಆ ಬಗ್ಗೆ ನಾನು ಮಾತನಾಡಲ್ಲ ಎಂದರು. ಸರ್ಕಾರ ಬರೋಕೆ ನಮ್ಮ ಕಾರ್ಯಕರ್ತರು ಚಿತ್ರಾನ್ನ, ಮೊಸರನ್ನ ತಿಂದು ಬಾವುಟ ಕಟ್ಟಿದ್ದಾರೆ. ತಮ್ಮ ಮನೆಯಿಂದ ದುಡ್ಡು ಹಾಕಿ ಪ್ರಚಾರ ಮಾಡಿದ್ದಾರೆ. ಅವರ ಶ್ರಮದಿಂದ 106 ಜನ ಬಿಜಪಿ ಶಾಸಕರು ಆಯ್ಕೆಯಾದರು. ಅವರು ಗೆದ್ದಿದ್ದಕ್ಕೇನೆ ಉಳಿದವರು ಬಂದು ಸೇರಿಕೊಂಡಿದ್ದು ಎಂದು ತಿಳಿಸಿದರು.
ಕೊರೊನಾ ಪಾಸಿಟಿವ್ ಆದವರು ಕೋವಿಡ್ ಸೆಂಟರ್ ಗೆ ಬರಬೇಕು -ಸಂಸದ ಪ್ರತಾಪ್ ಸಿಂಹ

