ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ಅವರಿಗೆ ನಾನು ಕಿರುಕುಳ ನೀಡಿಲ್ಲ -ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ನನ್ನ ವಿರುದ್ಧ ಕಿರುಕುಳದ ಆರೋಪ ಮಾಡಿರುವ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಹೇಳಿಕೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಿಲ್ಪಾ ನಾಗ್ ಆರೋಪ ಸಂಪೂರ್ಣ ಸುಳ್ಳು. ನನ್ನ ಕಡೆಯಿಂದ ಅವರಿಗೆ ಯಾವುದೇ ಕಿರುಕುಳ ಆಗಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಬಗ್ಗೆ ಶಿಲ್ಪಾ ನಾಗ್ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾದವು. ಜಿಲ್ಲಾಧಿಕಾರಿಯಾಗಿ ಕೋವಿಡ್-19 ನಿಯಂತ್ರಿಸುವುದಕ್ಕೆ ಮಾತ್ರ ನನ್ನ ಮೊದಲ ಆದ್ಯತೆ. ನನ್ನ ಸಂಪೂರ್ಣ ಗಮನ ಮತ್ತು ಕೆಲಸಗಳು ಆ ಕಡೆಗೇ ಇವೆ ಎಂದು ಅವರು ತಿಳಿಸಿದ್ದಾರೆ.
ಶಿಲ್ಪಾ ನಾಗ್ ವಿರುದ್ಧ ಜಿಲ್ಲಾಧಿಕಾರಿಗಳು ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವು ಹೀಗಿವೆ;
ಶಿಲ್ಪಾ ನಾಗ್ ಅವರು ಕೋವಿಡ್ ಪರಿಶೀಲನಾ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಅಲ್ಲದೆ, ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೋವಿಡ್ ನಿಂದ ಆಗುತ್ತಿದ್ದ ಸಾವು ಹಾಗೂ ಸಕ್ರಿಯ ಪ್ರಕರಣಗಳ ವರದಿಗಳ ಮೇಲೆ ಸಹಿ ಮಾಡುತ್ತಿರಲಿಲ್ಲ. ಬದಲಿಗೆ ವಿರೋಧಾಭಾಸದ ಅಂಕಿ-ಅಂಶ ಕೊಡುತ್ತಿದ್ದರು. ಅದೆಲ್ಲವನ್ನು ಸರಿಪಡಿಸಬೇಕು ಎಂದು ಎಂದು ಸೂಚಿಸಿದ್ದೆ. ಈ ಕುರಿತ ದಾಖಲೆಯೂ ಇದೆ. ಜತೆಗೆ, ಈವರೆಗೂ ಕೊನೆಪಕ್ಷ ಒಂದೇ ಒಂದು ಕೋವಿಡ್ ಕೇರ್ ತೆರೆಯಲು ಕೂಡ ಪಾಲಿಕೆ ವಿಫಲವಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೇವಲ 20 ದಿನಗಳಲ್ಲಿ 18 ಕೋವಿಡ್ ಕೇರ್‍ಗಳನ್ನು ತೆರೆಯಲಾಗಿದೆ. ಆದರೆ, ಮೈಸೂರು ನಗರದಲ್ಲಿ ನಾನು ಮಧ್ಯ ಪ್ರವೇಶ ಮಾಡಿ ಮೂರು ಕೇಂದ್ರಗಳನ್ನು ತೆರೆದಿದ್ದೇನೆ.
ಖಾಸಗಿ ಕಂಪನಿಗಳಿಂದ ಬರುವ ಸಿಎಸ್ ಆರ್ ನಿಧಿಯ ಕೊಡುವಲ್ಲಿ ಅವರು ವಿಫಲರಾದರು. ಜೂನ್ 1ರ ಒಳಗೆ ಸಿಎಸ್ ಆರ್ ಮೊತ್ತದ ಪೂರ್ಣ ಲೆಕ್ಕ ಕೊಡುವಂತೆ ಸೂಚನೆ ನೀಡಿದ್ದೆ. ಆದರೆ ಅವರು ಈವರೆಗೂ ಲೆಕ್ಕ ಕೊಟ್ಟಿಲ್ಲ. ಅಲ್ಲದೆ, ಸಿಎಸ್‍ಆರ್ ನಿಧಿಯಿಂದ ತಾಲೂಕು ಮತ್ತು ಹಳ್ಳಿ ಪ್ರದೇಶಗಳಿಗೆ ಬಿಡಿಗಾಸನ್ನೂ ನೀಡದ ಅವರ ಕ್ರಮ ಅನ್ಯಾಯ ಮಾತ್ರವಲ್ಲದೆ ತಪ್ಪು ಕೂಡ. ಇದು ಸಾಲದು ಎಂಬಂತೆ ಕಳೆದ 10 ದಿನಗಳಿಂದ ಶಿಲ್ಪಾ ನಾಗ್ ಅವರು ಜಿಲ್ಲಾಡಳಿತದ ವಿರುದ್ಧ ನಿರಂತರವಾಗಿ ಪತ್ರಿಕಾ ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಎಲ್ಲರೂ ಗಮನಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.