ಮನೆಯಲ್ಲಿ ಮೃತಪಟ್ಟವರೂ ಸೇರಿ ಹಲವು ಕೋವಿಡ್ ಸಾವುಗಳ ಪರಿಗಣನೆಯಿಂದ ಸಾವಿನ ಸಂಖ್ಯೆ ಹೆಚ್ಚಳ -ಡಾ. ಶಿವಪ್ರಸಾದ್

ಮೈಸೂರು: ಕೋವಿಡ್-19 ಸೋಂಕು ಧೃಡಪಟ್ಟು ಮನೆಯಲ್ಲಿ ಮೃತಪಟ್ಟವರೂ ಸೇರಿದಂತೆ ಹಲವು ಕೋವಿಡ್ ಸಾವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರುವ ಕಾರಣ ಕಳೆದ ಕೆಲ ದಿನಗಳಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಸೋಂಕು ಧೃಡಪಟ್ಟು ಮನೆಯಲ್ಲಿ ಸಾವು ಸಂಭವಿಸಿದ ಸಂದರ್ಭದಲ್ಲಿ ಕಮ್ಯೂನಿಟಿ ಡೆತ್ ಆಡಿಟ್‍ನಲ್ಲಿ ವರದಿ ಮಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್-19 ಪ್ರಕರಣ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದರೂ, ಸಾವಿನ ಪ್ರಮಾಣ ಹೆಚ್ಚಾಗಿ ದಾಖಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಆಸ್ಪತ್ರೆಗಳು ಕೋವಿಡ್‍ನಿಂದ ಮೃತರಾದವರ ಒಂದು ವಾರದ ಪಟ್ಟಿಯನ್ನು ತಡವಾಗಿ ಒಂದೇ ಬಾರಿಗೆ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ.
ಕೋವಿಡ್-19 ಮರಣದ ಮಾಹಿತಿಯನ್ನು ಟ್ರಯಾಜ್ ತಂಡದಿಂದ 10 ದಿನಗಳ ನಂತರ ಕರೆ ಮಾಡಿದಾಗ ಲಭ್ಯವಾದ ಮಾಹಿತಿಯನ್ನು ಪಡೆದು ರಾಜ್ಯಕ್ಕೆ ಕಳುಹಿಸಲಾಗಿದೆ.
ಸಿಟಿ ಸ್ಕ್ಯಾನ್ ಮೂಲಕ ಕೋವಿಡ್-19 ಧೃಡೀಕೃತ ಮರಣದ ವರದಿಯನ್ನು ಕೂಡ ಸಾಸ್ಟ್ ಮೂಲಕ ಸಲ್ಲಿಸಲಾಗುತ್ತಿದೆ. ಈ ಕಾರಣದಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.