ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಅರ್ಥಪೂರ್ಣ ಯೋಗ ಸೆಷನ್

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಸೋಮವಾರ ಆನ್‌ಲೈನ್ ಯೋಗ ಸೆಷನ್‌ ಆಯೋಜಿಸಿತ್ತು.

ಈ ಕಾರ್ಯಕ್ರಮ ಕುರಿತು ಮಾತನಾಡಿದ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳ ಜನರಲ್ ಮ್ಯಾನೇಜರ್ ಡಾ. ಗೌತಮ್ ದಾಸ್, ಭಾರತ ಯೋಗದ ನೆಲೆ. ಈ ಪ್ರಾಚೀನ ಅಭ್ಯಾಸದ ಮಹತ್ವ ಹಲವು ಬಾರಿ ಕಡೆಗಣನೆಗೆ ಒಳಗಾಗುತ್ತದೆ. ನಾವು ಯೋಗದ ಶಕ್ತಿ ಮತ್ತು ದೇಹ ಮತ್ತು ಮನಸ್ಸಿನ ಮೇಲೆ ಅದರ ಪ್ರಭಾವವನ್ನು ಬಲವಾಗಿ ನಂಬುತ್ತೇವೆ ಎಂದರು.

ನಮ್ಮ ಈ ಆನ್‌ಲೈನ್ ಯೋಗ ಸೆಷನ್‌, ಸಾಂಕ್ರಾಮಿಕ ಉಂಟು ಮಾಡಿರುವ ಒತ್ತಡದ ಸಮಯದಲ್ಲಿ ಸಕಾರಾತ್ಮಕತೆಯನ್ನು ಹರಡಲು ಮಾಡಿದ ಪ್ರಯತ್ನವಾಗಿತ್ತು. ಭೌತಿಕ ಮಾತ್ರವಲ್ಲದೆ ಮಾನಸಿಕ ಅಂಶಗಳತ್ತವೂ ಗಮನ ಕೇಂದ್ರೀಕರಿಸಬೇಕಾದ ಶಕ್ತಿ ಪಡೆಯುವ  ಸಾಂಪ್ರದಾಯಿಕ ವಿಧಾನವಾದ ಯೋಗದತ್ತ ಜನರನ್ನು ಸೆಳೆಯಲು ಪ್ರಯತ್ನಿಸಲಾಯಿತು ಎಂದು ಅವರು ಹೇಳಿದರು.

ಕೊವಿಡ್‌-19 ಸಾಂಕ್ರಾಮಿಕ ಮತ್ತು ಸಂಬಂಧಿತ ಲಾಕ್‌ಡೌನ್ ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಅಪಾರ ಒತ್ತಡವನ್ನುಂಟುಮಾಡಿದೆ. ಈ ಸಮಯದಲ್ಲಿ ಎದುರಿಸುವ ಅನಿಶ್ಚಿತತೆ ಮತ್ತು ಒಂಟಿತನವನ್ನು ನಿಭಾಯಿಸಲು ಜನರು ಸಹಾಯ ಮಾಡುವ ಜೊತೆಗೆ ಅವರ ದೈಹಿಕ ಸ್ವಾಸ್ಥ್ಯವನ್ನು ರಕ್ಷಿಸಿಕೊಳ್ಳಲು ಯೋಗ ಪ್ರಬಲ ಸಾಧನ ಎಂದು ಯೋಗ, ಸ್ವಾಸ್ಥ್ಯ ಮತ್ತು ಧ್ಯಾನದ ಖ್ಯಾತ ತಜ್ಞೆ ಸುಪ್ರಿಯಾ ದತ್ತಾ ಹೇಳಿದರು.

ಸುಪ್ರಿಯಾ ದತ್ತಾ ಅವರು ಯೋಗಾಭ್ಯಾಸದ ಸೆಷನ್‌  ನಡೆಸಿಕೊಟ್ಟರು. ಗೂಗಲ್ ಮೀಟ್‌ನಲ್ಲಿ ಬೆಳಿಗ್ಗೆ 7 ರಿಂದ 8ರ ವರೆಗೆ ಆಯೋಜಿಸಲಾಗಿದ್ದ ಯೋಗ ಸೆಷನ್‌ನಲ್ಲಿ, ಸುಮಾರು 52ಕ್ಕೂ ಹೆಚ್ಚು ವಿಭಿನ್ನ ವರ್ಗದ ಜನರು ಭಾಗವಹಿಸಿದ್ದರು.