ಕೆ.ಆರ್.ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಸಲು ಸೂಚನೆ -ಶಾಸಕ ನಾಗೇಂದ್ರ

ಮೈಸೂರು: ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಆರ್. ಆಸ್ಪತ್ರೆಗೆ ಶಾಸಕ ಎಲ್.ನಾಗೇಂದ್ರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ವಾರ್ಡ್ ಗಳ ಪರಿಶೀಲನೆ ನಡೆಸಿದ ಶಾಸಕ ನಾಗೇಂದ್ರ, ಆಸ್ಪತ್ರೆಯ ಡೀನ್ ನಂಜರಾಜ್ ಹಾಗೂ ವೈದ್ಯಕೀಯ ಅಧೀಕ್ಷಕ ನಂಜುಂಡಸ್ವಾಮಿಯಿಂದ ಮಾಹಿತಿ ಪಡೆದರು.
ಈ ಕೂಡಲೇ ಅವ್ಯವಸ್ಥೆ ಸರಿಪಡಿಸಿ ಸೆಕ್ಯುರಿಟಿ ಹೆಚ್ಚಿಸುವಂತೆ ಶಾಸಕರು ಸೂಚಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಕುರಿತು ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಈ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸುತ್ತೇನೆ. ಕೆ.ಆರ್ . ಆಸ್ಪತ್ರೆಗೆ ಹೆಚ್ಚಿನ ಸೆಕ್ಯುರಿಟಿಯ ಅವಶ್ಯಕತೆ ಇದೆ ಎಂದರು. ಮೂರು ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಜೊತೆಗೆ ಎಲ್ಲಾ ಭಾಗಗಳಲ್ಲೂ ಸಿಸಿಟಿವಿ ಅಳವಡಿಸುವಂತೆ ಹೇಳಿದ್ದೇನೆ. ಸದ್ಯಕ್ಕೆ ಚಲುವಾಂಬ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿಸಿದರು.

ಕೊರೊನಾದಿಂದಾಗಿ ಜಯದೇವ ಬಿಲ್ಡಿಂಗ್ ನಲ್ಲಿದ್ದ ರೋಗಿಗಳನ್ನು ಇಲ್ಲಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಕೃತ್ಯ ನಡೆದಿದೆ. ಸದ್ಯ ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ ಎಂದರು.