ಮಳೆಗಾಲ ಅಧಿವೇಶನದಲ್ಲಿ 5 ಸುಗ್ರೀವಾಜ್ಞೆ ಸೇರಿ 20 ಪ್ರಮುಖ ಮಸೂದೆಗಳ ಮಂಡನೆ -ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ 5 ಸುಗ್ರೀವಾಜ್ಞೆಗಳು ಸೇರಿದಂತೆ 20 ಪ್ರಮುಖ ಮಸೂದೆಗಳನ್ನು ಮಂಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಶನಿವಾರ ಮಾತನಾಡಿದರು.

ಜು. 18ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಸದಸ್ಯರ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಸರ್ಕಾರ ಎಲ್ಲಾ ರೀತಿಯ ರಚನಾತ್ಮಕ ಚರ್ಚೆಗೆ ಸಿದ್ಧವಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಕೊರೊನಾ ಎರಡನೇ ಅಲೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ವಿಶ್ವ ಅತಿ ದೊಡ್ಡ ಲಸಿಕಾ ಅಭಿಯಾನ ದೇಶದಲ್ಲಿ ಯಶಸ್ವಿಯಾಗಿ ಜರುಗುತ್ತಿದೆ. ಸುಮಾರು 37 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಬರುವ ದಿನಗಳಲ್ಲಿ ಲಸಿಕಕಾರಣವನ್ನು ಚುರುಕುಗೊಳಿಸಲಾಗುವುದು ಎಂದರು.

ದೇಶದಲ್ಲಿ 135 ಕೋಟಿ ಜನಸಂಖ್ಯೆಯಿದೆ. ಸದ್ಯ 37 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ರಾಜ್ಯಗಳಿಗೆ ಅಗತ್ಯಾನುಸಾರ ಲಸಿಕೆ ಪೂರೈಸಲಾಗುತ್ತಿದೆ. ಹಂತ ಹಂತವಾಗಿ ಲಸಿಕೆ ನೀಡಲಾಗುವುದು ಎಂದರು.

ಸರಕಾರದಲ್ಲಿ ಆರೇಳು ವರ್ಷಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದವರನ್ನು ಸಚಿವ ಸಂಪುಟ ಪುನರಚನೆ ವೇಳೆ ಕೈಬಿಡಲಾಗಿದೆ. ಡಾ. ಹರ್ಷವರ್ಧನ ಅವರು ಆರೋಗ್ಯ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ಪಕ್ಷ ಸಂಘಟನೆ ಮಹತ್ವದ ಜಬ್ದಾರಿಯನ್ನು ನೀಡಲಾಗುವುದು ಎಂದವರು ತಿಳಿಸಿದರು.

ಸದ್ಯ ಕೋವಿಡ್ ನಿರ್ವಹಣೆ ಆದ್ಯತೆಯ ಕೆಲಸವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಪಕ್ಷ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್ ಸಿಂಗ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆಂದರು.