ಬೆಂಗಳೂರು: ನಾನು ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿಲ್ಲ ಎಂದು ನಟ ದರ್ಶನ್ ಹೇಳಿದ್ದಾರೆ.
ಬೆಂಗಳೂರಲ್ಲಿ ಗುರುವಾರ ದರ್ಶನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಈ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದರು.
ಹೋಟೆಲ್ ನಲ್ಲಿ ಊಟ ಕೊಡೋದು ಲೇಟ್ ಆಗಿತ್ತು. ಅದಕ್ಕೆ ಯಾಕಪ್ಪ ಲೇಟಾಯ್ತು ಎಂದು ಕೇಳಿದ್ದೆ. ಅಷ್ಟೆ. ಅದನ್ನ ನಾನು ಹಲ್ಲೆ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ ಎಂದರು ದರ್ಶನ್ .
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಾನು ಹಲ್ಲೆ ಮಾಡಿದ್ದೇನೆ ಎಂಬುದು ಆರೋಪ ಮಾತ್ರ. ಸಾಬೀತಾಗಿದೆಯಾ ಇಲ್ಲಾ ಅಲ್ವ. ಇಂದ್ರಜಿತ್ ಲಂಕೇಶ್ ಆರೋಪವನ್ನ ಸಾಬೀತು ಮಾಡಲಿ ಎಂದು ದರ್ಶನ್ ಸವಾಲು ಹಾಕಿದರು.
ಇಂದ್ರಜಿತ್ ಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇರಬಹುದು. ಇಂದ್ರಜಿತ್ ದೊಡ್ಡ ಇನ್ವೆಸ್ಟಿಗೇಟರ್. ಅವರು ಏನಾದರೂ ಮಾಡಿಕೊಳ್ಳಲಿ ಎಂದರು.
ವಂಚನೆ ಯತ್ನ ಪ್ರಕರಣ ಕುರಿತು ದರ್ಶನ್ ಪ್ರತಿಕ್ರಿಯಿಸಿ, ಅರುಣಕುಮಾರಿ ಜೂನ್ 16ರಂದು ನನ್ನ ಮನೆಗೆ ಬಂದಿದ್ದರು. ನಿನ್ನದು ಏನು ತಪ್ಪಿಲ್ಲ ಎಂದು ಅಂದೇ ಹೇಳಿ ಕಳಿಸಿದ್ದೆ. ನಾನು ಯಾವುದೇ ಕಾರಣಕ್ಕೂ ಇದನ್ನ ಮುಚ್ಚಿ ಹಾಕುತ್ತಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.

