ಎಲ್ಲಿದೆ ಗುಜರಾತ್ ಮಾಡೆಲ್? ಗುಜರಾತಿಗೆ ಸಿಕ್ಕಷ್ಟು ಲಸಿಕೆ ರಾಜ್ಯಕ್ಕೆ ಸಿಕ್ಕಿದೆಯಾ? -ಡಿ.ಕೆ. ಶಿವಕುಮಾರ್

ಬೆಂಗಳೂರು: ಎಲ್ಲದಕ್ಕೂ ಗುಜರಾತ್ ಮಾಡೆಲ್ ಎನ್ನುವ ಬಿಜೆಪಿ ಸರ್ಕಾರ, ಕೋವಿಡ್ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡಿರುವುದು ಏಕೆ? ಗುಜರಾತಿಗೆಷ್ಟು ಲಸಿಕೆ ಪೂರೈಸಿದೆ? ಕರ್ನಾಟಕಕ್ಕೆಷ್ಟು ಪೂರೈಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೆ? ಗುಜರಾತಿಗೆ ನೀಡಿರುವುದರಲ್ಲಿ ಶೇ.. 50 ರಷ್ಟಾದರೂ ನಮ್ಮ ರಾಜ್ಯಕ್ಕೆ ನೀಡಲಿಲ್ಲ. ಬಿಜೆಪಿಗೆ ಗುಜರಾತ್ ಮಾತ್ರ ಆದ್ಯತೆ. ಅವರು ಗುಜರಾತ್ ಉದ್ಧಾರ ಮಾಡಲಿ ಬೇಡ ಅನ್ನುವುದಿಲ್ಲ. ಆದರೆ ಲಸಿಕೆ ವಿಚಾರದಲ್ಲಿ ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೋ ಅಷ್ಟನ್ನೇ ರಾಜ್ಯಕ್ಕೂ ನೀಡಲಿ ಎಂದು ಮುಖ್ಯಮಂತ್ರಿಗಳು ಧ್ವನಿ ಎತ್ತಬೇಕು. ಈ ಬಗ್ಗೆ ಎಲ್ಲ ಸಂಸದರು ಮಾತನಾಡಬೇಕು ಎಂದು ಡಿಕೆಶಿ ಹೇಳಿದರು.

ಗುಜರಾತ್ ಮಾಡೆಲ್ ಎಲ್ಲಿದೆ? ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಎಲ್ಲ ಮಾಡಲಾಯ್ತು. ವ್ಯಾಪಾರಿಗಳು ಉದ್ಯಮಿಗಳ ಪರ ಅಂತಾ ಬಿಂಬಿಸಿಕೊಂಡ ಬಿಜೆಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಮನ್ನಾ ಮಾಡಲಿಲ್ಲಾ ಯಾಕೆ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ..? ಸರ್ಕಾರದವರು ಅಧ್ಯಯನ ಮಾಡಲು ಗುಜರಾತಿಗೆ ಹೋಗಲಿ, ನಮ್ಮ ಅಭ್ಯಂತರವಿಲ್ಲ. ಅವರು ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ, ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ ಎಂದರು.