ಸಿಎಂ ಬದಲಾವಣೆ ನಂತರ ಯಾವ ವಾಣಿ ಕೇಳಿ ಬರುತ್ತದೆ ಎನ್ನುವುದನ್ನು ಕಾದು ನೋಡುತ್ತೇವೆ – ಸತೀಶ ಜಾರಕಿ ಹೊಳಿ

ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಂತರ ಯಾವ ವಾಣಿ ಕೇಳಿ ಬರುತ್ತದೆ ಎನ್ನುವುದನ್ನು ಕಾದು ನೋಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್ ನವರಿಗೆ ಲಾಭನೂ ಇಲ್ಲ. ನಷ್ಟನೂ ಇಲ್ಲ. ಅದನ್ನು ಬಿಟ್ಟು ಬೇರೆ ಕೆಲಸ ಮಾಡಬೇಕಿದೆ. ಅವರ ಪಕ್ಷದಲ್ಲಿ ಬೇರೆ ಅಭ್ಯರ್ಥಿ ಮುಖ್ಯಮಂತ್ರಿ ಆಗುತ್ತಾರೆ ಎಂದರು.

2023ರ ಚುನಾವಣೆ ಸಿದ್ದತೆ ಮಾಡಿಕೊಳ್ಳಲು ಜಿಲ್ಲೆ ಸೇರಿದಂತೆ ಬಾಂಬೆ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ರಾಜಕೀಯ ಎಂದ ಮೇಲೆ ಜಾತಿ ಲೆಕ್ಕಾಚಾರ ಇದ್ದೆ ಇರುತ್ತದೆ. ಆಯಾ ಜಾತಿ ಮುಖಂಡರು ಕಾಂಗ್ರೆಸ್ ನಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ನಿರತರಾಗಿದ್ದಾರೆ ಅದು ಸ್ವಾಭಾವಿಕ ಎಂದರು.

ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ. ದೆಹಲಿಯಲ್ಲಿ ಯೋಜನೆ ಫಿಕ್ಸ್ ಮಾಡುತ್ತಾರೆ. ಹೀಗಾಗಿ ಇಂಥ ಅವಘಡಗಳು ನಡೆಯುತ್ತಿವೆ. ಸ್ಮಾರ್ಟ್ ಸಿಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರನ್ನು ಕರೆದುಕೊಂಡು ಸಭೆ ಮಾಡಬೇಕು. ಸ್ಥಳೀಯರೇ ಸಚಿವರಿದ್ದಾಗ ಸುಲಭವಾಗುತ್ತದೆ. ಬೇರೆ ಜಿಲ್ಲೆಯವರನ್ನು ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದರು.