ಮೈಸೂರು: ಮುಖ್ಯಮಂತ್ರಿ ಜಾತಿವಂತನಾಗಬಾರದು, ನೀತಿವಂತನಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಜಾತಿವಂತನಾಗಬಾರದು, ನೀತಿವಂತನಾಗಬೇಕು. ತಾವು ಯಾವ ಸಂದೇಶ ರವಾನೆ ಮಾಡುತ್ತ್ತಿದ್ದೀರಾ ಮಠಾಧೀಶರೇ.? ಎಂದ ಅವರು, ಭ್ರಷ್ಟಾಚಾರ ಪರವಾಗಿ ನಿಮ್ಮ ಸಂದೇಶ ಇದೆಯೇ ಎಂದು ಹೆಚ್. ವಿಶ್ವನಾಥ್ ಪ್ರಶ್ನಿಸಿದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಗೌರವಯುತ ಬೀಳ್ಕೊಡುಗೆ ಸಿಗಲಿಲ್ಲ. ಆಗ ಯಾಕೆ ಸ್ವಾಮಿಜಿಗಳು ಯಡಿಯೂರಪ್ಪ ಪರ ನಿಲ್ಲಲಿಲ್ಲ. ಒಕ್ಕಲಿಗ, ಕುರುಬ, ಸೇರಿದಂತೆ ಬೇರೆ ಸಮುದಾಯದ ಶಾಸಕರ ಸಹಕಾರದಿಂದ ಸಿಎಂ ಆಗಿರೋದು. ಯಡಿಯೂರಪ್ಪನವರನ್ನು ಸಿಎಂ ಮಾಡಲು ಮಠಾಧೀಶರ ಕೊಡುಗೆ ಏನು ಎಂದು ವಿಶ್ವನಾಥ್ ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಕುಟುಂಬವರ್ಗದವರ ಸ್ವಯಂಕೃತ ಅಪರಾಧದಿಂದ ಜೈಲುಪಾಲಾಗಿದ್ದರು. ಬಿಜೆಪಿ ಯಡಿಯೂರಪ್ಪ ಅವರನ್ನು 6 ವರ್ಷಗಳ ಕಾಲ ಸಸ್ಪೆಂಡ್ ಮಾಡಿತ್ತು. ಆ ವೇಳೆ ಮಠಾಧೀಶರು ಯಡಿಯೂರಪ್ಪ ಪರ ನಿಲ್ಲಲಿಲ್ಲ. ಕೆಜೆಪಿ ಕಟ್ಟಿದಾಗಲೂ ಮಠಾಧೀಶರು ಬರಲಿಲ್ಲ ಎಂದು ಹೇಳಿದರು.
ರಾಜಕಾರಣ ಸ್ವಾಮಿಗಳ ಕೈಗೆ ಹೋಗಬಾರದು. ಸ್ವಾಮಿಗಳು ಸರ್ಕಾರದ ಭಾಗ ಅಲ್ಲ. ನಾನು ಕೈ ಮುಗಿದು ಶ್ರದ್ಧಾ ಭಕ್ತಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಸಿದ್ದಗಂಗಾ ಶ್ರೀಗಳ ರೀತಿ ನಡೆದಾಡುವ ದೇವರಾಗಬೇಕೇ ಹೊರತು, ನಡೆದಾಡುವ ರಾಜಕಾರಣಿಗಳಾಗಬೇಡಿ ಎಂದು ಹೆಚ್. ವಿಶ್ವನಾಥ್ ಹೇಳಿದರು.
ಕೆಂಗಲ್ ಹನುಮಂತಯ್ಯ ಅವರು ಸರ್ಕಾರದ ಕೆಲಸ ದೇವರ ಕೆಲಸ ಅಂತ ವಿಧಾನಸೌದದ ಮುಂದೆ ಬರೆಸಿದ್ದಾರೆ. ಆದರೀಗ ಸರ್ಕಾರದ ಕೆಲಸ ಸ್ವಾಮಿಗಳ ಕೆಲಸ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.
48 ಇದ್ದದ್ದು 104 ಆಯ್ತು, ಅದು ಮೋದಿಯಿಂದ. ಮೋದಿಯವರ ತತ್ವ ಸಿದ್ದಾಂತಕ್ಕೆ ವಿರುದ್ಧವಾಗಿ ಇವತ್ತಿನ ಸರ್ಕಾರ ನಡೆಯುತ್ತಿದೆ. ನಾವು 17 ಜನ ಬಿಜೆಪಿಗೆ ಬಂದಿದ್ದೇವೆ. ನಾವು ಲಿಂಗಾಯಿತರಲ್ಲ ಸ್ವಾಮಿ. ನಾವು ಯಡಿಯೂರಪ್ಪ ಅವರನ್ನು ಜಾತಿಯಿಂದ ನೋಡಲಿಲ್ಲ. ಹೋರಾಟಗಾರ ಅಂತ ಪಕ್ಷಕ್ಕೆ ಬಂದೆವು ಎಂದು ವಿಶ್ವನಾಥ್ ತಿಳಿಸಿದರು.
ನಾಲಿಗೆಗೆ ನಡೆಯೋ ನಾಯಕ ಯಾರಾದರೂ ಇದ್ದರೆ ಯಡಿಯೂರಪ್ಪ ಅಂತ ಹೇಳ್ತಾ ಇದ್ವಿ. ಆದ್ರೆ ಇವತ್ತು ಯಡಿಯೂರಪ್ಪ ತಮ್ಮ ನಾಲಿಗೆ, ಎರಡು ಕೈಗಳನ್ನು ಮಗನಿಗೆ ಕೊಟ್ಟಿದ್ದಾರೆಂದು ಟೀಕಿಸಿದರು.

