ನಂದಿಬೆಟ್ಟ: ನಾವು ಪರೀಕ್ಷೆ ಬರೆದಿದ್ದೆವು. ಈಗ ರಿಸಲ್ಟ್ ಬಂದಿದೆ. ನಾವೆಲ್ಲರೂ ಪಾಸಾಗಿದ್ದೇವೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೇಶ್ವರ ಮಾರ್ಮಿಕವಾಗಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ರೋಪ್ ವೇ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಶುಕ್ರವಾರ ಬೆಳಗ್ಗೆ ಗಿರಿಧಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಮುನ್ನ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾವು ಪರೀಕ್ಷೆ ಪಾಸಾಗಿದ್ದೇವೆ. ಫಲಿತಾಂಶ ಬಂದಾಯಿತು ಎಂದು ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.
ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರಕಾರ ಅಸ್ತಿತ್ವದಲ್ಲಿ ಇರುತ್ತದೆ. ಬಿಜೆಪಿ ನೇತೃತ್ವದ ಸರಕಾರ ಒಂದೇ ಇರುತ್ತದೆ.
ಯಾರಿಗೆ ಆಗಲಿ ಮಂತ್ರಿ ಸ್ಥಾನ ಸೇರಿ ಯಾವ ಸ್ಥಾನಮಾನವೂ ಶಾಶ್ವತವಲ್ಲ. ಇದನ್ನೇ ನಾನು ಅನೇಕ ಸಲ ಹೇಳಿದ್ದೇನೆ. ಕೆಲವರು ಅರ್ಥ ಮಾಡಿಕೊಂಡರು, ಇನ್ನು ಕೆಲವರಿಗೆ ಅರ್ಥವಾಗಲಿಲ್ಲವೆಂದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ಸಂಬಂಧಿಸಿದಂತೆ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಅವರೇ ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ಈ ನಿಟ್ಟಿನಲ್ಲಿ ನನಗೆ ಹೆಚ್ಚಿನ ಮಾಹಿತಿಯಿಲ್ಲ ಎಂದರು.
ಕುಮಾರಸ್ವಾಮಿ ನನಗೆ, ನಮ್ಮ ಪಕ್ಷಕ್ಕೆ ರಾಜಕೀಯ ಎದುರಾಳಿ. ಅವರು ದ್ವಂದ್ವ ನಿಲುವಿನ ರಾಜಕಾರಣಿ. ಕೆಲಸ ಇದ್ದಾಗ ಸಿಎಂ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಈಗ ಸಿಎಂ ಅವರನ್ನೇ ದೂಷಿಸುತ್ತಾರೆ. ಅವಕಾಶವಾದಿ ರಾಜಕಾರಣ ಮಾಡುವ ಕಾರಣಕ್ಕೆ ಕುಮಾರಸ್ವಾಮಿ ಬಗ್ಗೆ ನಮ್ಮ ವಿರೋಧವಿದೆ ಎಂದು ಸಿಪಿ. ಯೋಗೇಶ್ವರ ಹೇಳಿದರು.
ಲೋಕಸಭಾ ಸದಸ್ಯ ಡಿಕೆ ಸುರೇಶ್ ನನ್ನನ್ನು ಸೀಡಿ ಯೋಗೇಶ್ವರ ಎಂದು ಕರೆದಿದ್ದಾರೆ. ಸುರೇಶ್ ಅವರನ್ನು ನಾನು ಕೇಡಿ ಸುರೇಶ್ ಎಂದು ಕರೆಯಬಹುದು. ಆದರೆ, ಹಾಗೆ ಕರೆಯುವ ಜಾಯಮಾನ ನನ್ನದಲ್ಲ ಎಂದು ಟಾಂಗ್ ನೀಡಿದರು.

