ಕನ್ನಡ ಚಿತ್ರರಂಗದ ʼಓಬವ್ವʼ ಇನ್ನಿಲ್ಲ

ಬೆಂಗಳೂರು: ಕನ್ನಡಿಗರ ಪಾಲಿನ ಅಭಿನಯ ಶಾರದೆ ಆಗಿದ್ದ ಹಿರಿಯ ನಟಿ ಜಯಂತಿ (76) ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಜಯಂತಿ ಅವರು ಸೋಮವಾರ ಬೆಳಗಿನ ಜಾವ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಕೆಲ ವರ್ಷಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ಬಾರಿ ಅವರು ಐಸಿಯೂ ಘಟಕದಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು.

ಕನ್ನಡವೂ ಸೇರಿ ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಅವರು, ಭಾರತೀಯ ಚಿತ್ರರಂಗದಲ್ಲಿ ಜಯಂತಿ ಎಂದೇ ಚಿರಪರಿಚಿತರು.

ಡಾ.ರಾಜ್ಕುಮಾರ್ ಅವರ ಜತೆ ಸುಮಾರು 40ರಿಂದ 45 ಚಿತ್ರಗಳೂ ಸೇರಿದಂತೆ ಕನ್ನಡವೊಂದರಲ್ಲೇ 190 ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು, ಎಲ್ಲ ಭಾಷೆಗಳೂ ಸೇರಿ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿ ಅವರ ಜನ್ಮನಾಮ ಕಮಲಾ ಕುಮಾರಿ. ಅವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ತಾಯಿ ಸಂತಾನಲಕ್ಷ್ಮಿ ಅವರು ಗೃಹಿಣಿಯಾಗಿದ್ದರು.

1968ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿ ಅವರು, ಅದಕ್ಕೂ ಮುನ್ನ ತೆಲುಗಿನ ಎನ್ಟಿಆರ್ ನಟನೆಯ ಜಗದೇಕವೀರುನಿ ಕಥ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.

ನಿರ್ಮಾಪಕಿ, ನಿರ್ದೇಶಕಿಯೂ ಆಗಿದ್ದ ಜಯಂತಿ ಅವರಿಗೆ 1965ರ ಮಿಸ್ ಲೀಲಾವತಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಎರಡು ಮುಖ (1969), ಮನಸ್ಸಿನಂತೆ ಮಾಂಗಲ್ಯ (1976), ಧರ್ಮ ದಾರಿ ತಪ್ಪಿತು (1981), ಮಸಣದ ಹೂವು (1985), ಆನಂದ್ (1986) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲೆ ಮೊದಲ ಬಾರಿಗೆ ಬಿಕಿನಿ ತೊಟ್ಟು ಸುದ್ದಿಯಾಗಿದ್ದ ನಟಿ ಜಯಂತಿಯವರು ತಾವು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು, ಪಾತ್ರ ಬೇಡುವ ರೀತಿಯಲ್ಲಿ ಅಭಿನಯಿಸುತ್ತಿದ್ದರು.

ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು. ಒನಕೆ ಓಬವ್ವನ ಹಾಡಿನಲ್ಲಿ ಜಯಂತಿಯವರ ಅಭಿನಯ ಇಂದಿಗೂ ಜನಪ್ರಿಯ.

ನಟಿ ಜಯಂತಿ, 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1960 ರಿಂದ 1980ರ ದಶಕದವರೆಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು. ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಕನ್ನಡದಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತನಾಗ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ಜತೆಗೆ ತೆಲುಗಿನಲ್ಲಿ ಎನ್ಟಿಆರ್ ಸೇರಿ ಇನ್ನೂ ಅನೇಕರ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಮಹಾನಟಿಗೆ ಸಂತಾಪ
ಜಯಂತಿ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದದ್ದು ಕನ್ನಡ ಚಿತ್ರರಂಗ ಒಬ್ಬ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖಿಸಿದ್ದಾರೆ.

ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಸೇರಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿಸಿಎಂ ಡಾ.ಅಶ್ವತ್ಥನಾರಾಯಣ, ಸಚಿವ ಅರವಿಂದ ಲಿಂಬಾವಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ನಟ ನಟಿಯರು ಅಗಲಿದ ಮಹಾತಾರೆಗಾಗಿ ಕಂಬನಿ ಮಿಡಿದಿದ್ದಾರೆ.

ಅವರ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಇದು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತು. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪವನ್ನು ಅರ್ಪಿಸುತ್ತೇನೆ ಎಂದು ಉಪ ರಾಷ್ಟ್ರಪತಿಗಳು ಕ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.

ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಜೇನುಗೂಡು ಸಿನಿಮಾದ ಮೂಲಕ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ವರನಟ ರಾಜ್ ಕುಮಾರ್ ಜೊತೆ 47 ಸಿನಿಮಾಗಳಲ್ಲಿ ನಟಿಸಿ ದಾಖಲೆಯೇ ಮಾಡಿದ್ದಾರೆ. ಡಾ.ರಾಜ್ ಅವರಂತೆ ಜಯಂತಿಯವರೂ ನನ್ನ ನೆಚ್ಚಿನ ಕಲಾವಿದರಲ್ಲಿ ಒಬ್ಬರು. ಮಯೂರ, ಎಡಕಲ್ಲುಗುಡ್ಡದ ಮೇಲೆ, ಮಸಣದ ಹೂವು ಸೇರಿದಂತೆ ಹಲವು ನನಗೆ ಇಷ್ಟದ ಸಿನಿಮಾಗಳು. ವಯೋಸಹಜ ಸಮಸ್ಯೆಗಳಿಂದ ಕಳೆದ ಒಂದು ವರ್ಷದಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಚೇತರಿಸಿಕೊಂಡು ಇನ್ನಷ್ಟು ಕಾಲ ನಮ್ಮ ಜತೆಗಿರುತ್ತಾರೆ ಅಂದುಕೊಂಡಿದ್ದೆ. ಆದರೆ ಅವರು ನಮ್ಮನ್ನೆಲ್ಲಾ ತ್ಯಜಿಸಿರುವುದು ಬೆಳ್ಳಿ ತೆರೆಗೆ ತುಂಬಲಾರದ ನಷ್ಟ ಎಂದು ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಜಯಂತಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ತಾರೆಯರು, ತಂತ್ರಜ್ಞರು, ಸಾರ್ವಜನಿಕರು ಜಯಂತಿಯವರ ನಿವಾಸಕ್ಕೆ ಧಾವಿಸಿ ಬಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.