ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ ರಾಜೀನಾಮೆ ಬಗ್ಗೆ ತಿಳಿಸಿದರು.
ಸಮಾರಂಭದ ಬಳಿಕ ರಾಜ್ಯಪಾಲರನ್ನ ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಯಡಿಯೂರಪ್ಪ ಅವರು ಹೇಳಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2 ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ ಸಂಘದ ಕಾರ್ಯಕರ್ತನಾಗಿ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಮೆಲುಕು ಹಾಕಿದರು.
75 ವರ್ಷ ಮೀರಿದವರು ಕೇಂದ್ರ ಸಚಿವರಾಗಬಾರದು ಮತ್ತು ಸಿಎಂ ಆಗಬಾರದು ಎಂದು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದರು. ಆದರೆ ನನಗೆ ಮಾತ್ರ ಅದಕ್ಕೆ ವಿನಾಯಿತಿ ನೀಡಿ ಎರಡು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದೂ ಅವರು ಹೇಳಿದರು.
ನಂತರ ಅವರು ರಾಜೀನಾಮೆ ನಿರ್ಧಾರವನ್ನು ಗದ್ಗದಿತ ಧ್ವನಿಯಲ್ಲಿ ಘೋಷಣೆ ಮಾಡಿದರು. ಇದು ತಾನು ದುಃಖದಿಂದ ಹೇಳುತ್ತಿಲ್ಲ, ಹೆಮ್ಮೆಯಿಂದ ಹೇಳುತ್ತಿರುವುದಾಗಿ ಅವರು ತಿಳಿಸಿದರು.

