ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ಆರು ದಿನಗಳ ನಂತರ ಅವರ ಸಂಪುಟ ರಚನೆಯ ಕಸರತ್ತು ಕ್ಲೈಮ್ಯಾಕ್ಸ್‌ಗೆ ಬಂದಿದೆ.
ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಹೊತ್ತಿಗೆ ಅಂತಿಮ ಪಟ್ಟಿ ಅವರ ಕೈಸೇರಲಿದೆ.
22-26 ಮಂದಿಯ ಹೆಸರಿದೆ ಎನ್ನಲಾದ ಹೈಕಮಾಂಡ್ ಕೊಡುವ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಮಂಗಳವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಬುಧವಾರ ಇಲ್ಲವೇ ಗುರುವಾರ ನೂತನ ಸಂಪುಟದ ಪ್ರಮಾಣ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನಲಾಗಿದೆ.
ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವಂಥ ಸಮತೋಲನ ಸಂಪುಟ ರಚನೆ ಆಗಲಿದೆ. ಎಲ್ಲರೂ ಸಚಿವರಾಗಲು ಆಗದು ಎಂಬ ಅಂಶ ನಮ್ಮ ಶಾಸಕರಿಗೆ ಗೊತ್ತಿದೆ. ಹಿಂದೆಯೂ ಒಂದು ಸಂಪುಟ ಇತ್ತು. ಅದೆಲ್ಲವನ್ನೂ ಗಮನದಲ್ಲಿದ್ದಟ್ಟುಕೊಂಡು ಸಂಪುಟ ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೈಕಮಾಂಡ್ ಅಂತಿಮ ಪಟ್ಟಿ ಆಖೈರು ಮಾಡಿದ ಮೇಲೆಯೂ ಸಚಿವಾಕಾಂಕ್ಷಿಗಳು ಬಿರುಸಿನ ಲಾಬಿ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಂತೂ ಯಡಿಯೂರಪ್ಪ, ಸಂಘ ಪರಿವಾರ ಮತ್ತು ಹೈಕಮಾಂಡ್ ಪಟ್ಟಿಗಳ ಒತ್ತಡದಲ್ಲಿ ಹೈರಾಣಾಗಿದ್ದಾರೆ.
ಸಂಘ ಪರಿವಾರ ಮತ್ತು ಮುಖ್ಯಮಂತ್ರಿಗಳ ಬಳಿ ಇರುವ ಯಡಿಯೂರಪ್ಪ ಅವರು ಶಿಫಾರಸ್ಸು ಮಾಡಿರುವ ಆಕಾಂಕ್ಷಿಗಳ ಪಟ್ಟಿಯನ್ನೂ ಅವಲೋಕನ ಮಾಡಿರುವ ವರಿಷ್ಠರು, ಅಂತಿಮ ಪಟ್ಟಿಯನ್ನು ಬೊಮ್ಮಾಯಿ ಕೈಗಿಡಲಿದ್ದಾರೆ.
ಸಂಪುಟ ಲೆಕ್ಕ ಹೇಗೆ?
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹೊಸಬರು, ಹಳಬರು ಹಾಗೂ ವಲಸಿಗರನ್ನು ಒಳಗೊಂಡ ಸಮತೋಲಿತ ಕ್ಯಾಬಿನೆಟ್ ಅಸ್ತಿತ್ವಕ್ಕೆ ಬರಲಿದ್ದು, 17 ವಲಸಿಗರ ಪೈಕಿ 9, ಯಡಿಯೂರಪ್ಪ ಸಂಪುಟದಲ್ಲಿದ್ದ 9 ಹಾಗೂ ಹೊಸಬರು 8 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗಿದೆ.
ಮುಖ್ಯವಾಗಿ ಸಂಘದ ಹಿನ್ನೆಲೆಯಿಂದ ಬಂದ ಹಾಗೂ ಬಿಜೆಪಿ ಮೂಲ ನಿವಾಸಿಗಳಿಗೆ ಅಗ್ರ ಆದ್ಯತೆ ನೀಡಬೇಕು ಹಾಗೂ ಹೈಪ್ರೊಫೈಲ್ ಖಾತೆಗಳೂ ಅವರಿಗೇ ಹೋಗಬೇಕು ಎಂದು ವರಿಷ್ಠರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಈ ಸಂಖ್ಯೆಗಳಲ್ಲಿ ಕೊಂಚ ವ್ಯತ್ಯಾಸವೂ ಆಗಬಹುದು.
ವಲಸಿಗರಲ್ಲಿ ಮುಖ್ಯವಾಗಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜು, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಆನಂದ್ ಸಿಂಗ್, ಡಾ.ಕೆ.ಸಿ.ನಾರಾಯಣ ಗೌಡ, ಶಿವರಾಮ ಹೆಬ್ಬಾರ್, ಮುನಿರತ್ನ ಸಂಪುಟದೊಳಕ್ಕೆ ಬರಬಹುದು ಎನ್ನಲಾಗುತ್ತಿದ್ದು, ಈ ಪಟ್ಟಿಯಲ್ಲಿರುವ ಶಿವರಾಮ್ ಹೆಬ್ಬಾರ್ ಬಿ.ಸಿ.ಪಾಟೀಲ್ ಅನುಮಾನ ಎಂಬ ಸುದ್ದಿಗಳೂ ಇವೆ. ಜತೆಗೆ ಶಂಕರ್, ಕೋಲಾರದ ನಾಗೇಶ್, ಶ್ರೀಮಂತ ಪಾಟೀಲ್ ಅವರಿಗೆ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ಬಿ.ಶ್ರೀರಾಮುಲು, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಜಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ ಸೇರಿದಂತೆ ಅವಕಾಶ ತಪ್ಪಬಹುದು ಎಂದು ಹೇಳಲಾಗಿದ್ದ ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್.ಸುರೇಶ್ ಕುಮಾರ್ ಅವರೂ ಸಚಿವರಾಗಬಹುದು ಎಂಬ ಮಾಹಿತಿ ಇದೆ.
ಮೇಲೆ ತಿಳಿಸಲಾದ ವಲಸಿಗರು ಹಾಗೂ ಹಳಬರ ಜತೆಗೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬದಲಾಗಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ಪಿ.ರಾಜೀವ್, ಸುನೀಲ್ ಕುಮಾರ್, ರಾಜೂಗೌಡ, ಎಸ್.ಎ.ರಾಮದಾಸ್, ಹರ್ಷ ವರ್ಧನ್, ರೂಪಾಲಿ ನಾಯ್ಕ್ ಹೆಸರುಗಳು ಹೊಸ ಸಚಿವರ ಯಾದಿಯಲ್ಲಿವೆ ಎನ್ನಲಾಗಿದೆ.
ಇದಲ್ಲದೆ, ಈವರೆಗಿನ ಎಲ್ಲ ಬಿಜೆಪಿ ಸರಕಾರಗಳಲ್ಲೂ ಸಚಿವ ಸ್ಥಾನಕ್ಕೆ ಪ್ರಯತ್ನವನ್ನೂ ಮಾಡದ ಹಾಗೂ ಸಚಿವ ಸ್ಥಾನಕ್ಕೆ ಪರಿಗಣನೆಯೂ ಮಾಡದ ಕುಂದಾಪುರ ಶಾಸಕ ಹಾಗೂ ಬಿಜೆಪಿ ಅತ್ಯಂತ ಪ್ರಾಮಾಣಿಕ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗಬುದು ಎಂಬ ಸುದ್ದಿ ಹರಿದಾಡುತ್ತಿದೆ. ಶೆಟ್ಟರ ಬಗ್ಗೆ ಹೈಕಮಾಂಡ್ ಹಾಗೂ ಆರ್‌ಎಸ್‌ಎಸ್ ಕೂಡ ಸಮ್ಮತಿಸಿದೆ ಎಂದು ಗೊತ್ತಾಗಿದೆ.
ಹೊನ್ನಾಳಿ ಶಾಸಕ ಹಾಗೂ ಬಿಎಸ್‌ವೈ ಕಟ್ಟಾ ಬೆಂಬಲಿಗ ರೇಣುಕಾಚಾರ್ಯ ಅವರ ಹೆಸರೂ ಕೇಳಿಬರುತ್ತಿದ್ದು, ಅವರಿಗೆ ಸಂಘದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದ ಮಾಹಿತಿ ಇದೆ.
ಸಂಭನೀಯ ಪಟ್ಟಿಗಳ ಜತೆ ಭರ್ಜರಿ ಲಾಬಿ
ಸಚಿವಾಕಾಂಕ್ಷಿಗಳ ಲಾಬಿ ಬಿರುಸಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ರಾಜೂಗೌಡ ಮುಂತಾದವರು ದಿಲ್ಲಿಯಲ್ಲಿ ವಿವಿಧ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ವಲಸಿಗರಂತೂ ಒಂದೆಡೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದು, ಅದರ ಜತೆಗೆ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲಿಗೇ ಹೋದರೂ ನೆರಳಿಂತೆ ಫಾಲೋ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

