ಈ ಬಾರಿ ಡಿಸಿಎಂ ಸ್ಥಾನ ಇಲ್ಲ; ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿಲ್ಲ -ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಶಾಕ್ ನೀಡಿದ್ದಾರೆ.

ಈ ಬಾರಿ ಡಿಸಿಎಂ ಸ್ಥಾನ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸಿಎಂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಈಗಾಗಲೇ ನೂತನ ಸಚಿವರ ಪಟ್ಟಿ ಅಂತಿಮವಾಗಿದೆ. 29 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ ಟಿ, 1 ಮಹಿಳಾ ಶಾಸಕಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಚಿವರ ಹೆಸರಿನ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ. ನೂತನ ಸಚಿವರು ಬುಧವಾರ ಮಧ್ಯಾಹ್ನ 2.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಹೇಳಿದರು.

ಈ ಬಾರಿ ಸಚಿವ ಸಂಪುಟವನ್ನು ಅನುಭವ ಹಾಗೂ ಹೊಸ ಶಕ್ತಿಯ ಮಿಶ್ರಣದಲ್ಲಿ ರಚಿಸಲಾಗಿದೆ. ಪ್ರಧಾನ ಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಮಾರ್ಗದಲ್ಲಿ ಈಗಾಗಲೇ ಹೇಳಿದಂತೆ ಜನಪರ ಆಡಳಿತ ಕೊಡುವ ಹಿನ್ನಲೆಯಲ್ಲಿ ಸಂಪುಟ ರಚನೆ ಮಾಡಲಾಗುತ್ತಿದೆ ಎಂದರು.

ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಈ ಸಂಪುಟ ರಚನೆಯಾಗಿದೆ. ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ, ವಿಶ್ವಾಸ ಗಳಿಸಿ, ನೂತನವಾದಂತ ಒಳ್ಳೆಯ ಆಡಳಿತ ಕೊಡುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಹೇಳಿದರು.

ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಹೆಸರಿಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಮಾತನಾಡಿ ಹೇಳಿದ್ದಾರೆ. ಆ ಕುರಿತು ನಾನು ಏನೂ ಹೇಳೋದಿಲ್ಲ. ಆದರೆ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ ಎಂಬುದನ್ನು ಹೇಳಬಲ್ಲೆ ಎಂದು ಸಿಎಂ ತಿಳಿಸಿದರು.