ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಕೆಲವರಿಗೆ ಬಂಪರ್ ಹೊಡೆದಿದೆ.
ಯಡಿಯೂರಪ್ಪ ಸಂಪುಟದಲ್ಲಿದ್ದವರಿಗೆ ಬಹತೇಕ ಅದೇ ಖಾತೆಗಳನ್ನು ನೀಡಿದ್ದರೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದವರಿಗೆ ಭರ್ಜರಿ ಲಾಟರಿ ಹೊಡೆದಿದೆ.
ಇದರಲ್ಲಿ ಪ್ರಮುಖವಾಗಿ ಕಾರ್ಕಳದ ವಿ. ಸುನೀಲ್ ಕುಮಾರ್ ಅವರಿಗೆ ಪ್ರಬಲವಾದ ಇಂಧನ ಖಾತೆಯ ಜತೆಗೆ ಕನ್ನಡ ಸಂಸ್ಕೃತಿಯನ್ನೂ ಕೊಡಲಾಗಿದೆ.
ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ನಂ. 2 ಸ್ಥಾನದ ಖಾತೆಯಾದ ಗೃಹ ವಹಿಸಲಾಗಿದೆ.
ಇನ್ನು, ಒಟ್ಟು 29 ಸಚಿವರ ಪೈಕಿ 15 ಸಚಿವರಿಗೆ ಹಿಂದಿನ ಸಂಪುಟದಲ್ಲಿ ನಿರ್ವಹಿಸಿದ್ದ ಖಾತೆಗಳನ್ನೇ ನೀಡಲಾಗಿದ್ದು, 7 ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ, ಅರಗ ಜ್ಞಾನೇಂದ್ರ ಮತ್ತು ಸುನೀಲ್ ಕುಮಾರ್ ಅವರಿಬ್ಬರಿಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಎಲ್ಲಡೆ ಅಚ್ಚರಿಯಾಗಿದ್ದು, ಅದರಲ್ಲೂ ಗೃಹ ಖಾತೆಯನ್ನು ಹಿರಿಯ, ಅನುಭವಿಗಳನ್ನು ಪಕ್ಕಕ್ಕಿಟ್ಟು ಅರಗ ಜ್ಞಾನೇಂದ್ರಗೆ ನೀಡಲಾಗಿದೆ.
ಉಳಿದಂತೆ ಸಂಪುಟದಲ್ಲಿ ವಲಸಿಗರಿಗೆ ಹಿಂದಿನ ಸಂಪುಟದಲ್ಲಿದ್ದ ಖಾತೆಗಳನ್ನೇ ನೀಡಲಾಗಿದೆ. ಅವರ ಮನವಿಯಂತೆ ಹಳೆಯ ಖಾತೆಗಳನ್ನೇ ಕೊಡಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಮತ್ತು ಗೃಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆರ್.ಅಶೋಕ್ ಅವರಿಗೆ ಹಿಂದಿನ ಸಂಪುಟದಲ್ಲಿ ಹೊಂದಿದ್ದ ಕಂದಾಯ ಇಲಾಖೆಯನ್ನೇ ನೀಡಲಾಗಿದೆ.
ಇದಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದ ಶಂಕರ ಮುನೇನಕೊಪ್ಪ, ಹಾಲಪ್ಪ ಆಚಾರ್, ಬಿ.ಸಿ.ನಾಗೇಶ್ ಅವರಿಗೂ ಮಹತ್ವದ ಖಾತೆಗಳನ್ನೇ ಹಂಚಿಕೆ ಮಾಡಲಾಗಿದೆ.
ಅಲ್ಲದೆ, ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಜಲ ಸಂಪನ್ಮೂಲ ಖಾತೆಯನ್ನು ಹಿರಿಯರಾದ ಗೋವಿಂದ ಕಾರಜೋಳ ಅವರಿಗೇ ನೀಡಲಾಗಿದೆ. ಅವರು ಬಿಎಸ್ವೈ ಸಂಪುಟದಲ್ಲಿ ಲೊಕೋಪಯೋಗಿ ಇಲಾಖೆಯನ್ನು ಹೊಂದಿದ್ದರು. ಇನ್ನು, ಹಿಂದಿನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆಗಳನ್ನೇ ಈ ಸಂಪುಟದಲ್ಲೂ ಮುಂದುವರಿಸಲಾಗಿದೆ.
ಇನ್ನು, ಮುಖ್ಯಮಂತ್ರಿಯೇ ಹಣಕಾಸು ಇಲಾಖೆಯನ್ನು ಇಟ್ಟುಕೊಳ್ಳುವ ಪರಂಪರೆ ಈ ಸಂಪುಟದಲ್ಲೂ ಮುಂದುವರಿದಿದೆ. ಹಾಗೆ ನೋಡಿದರೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಂದಿದ್ದ ಸಾರಿಗೆ ಇಲಾಖೆಯನ್ನು ಈ ಬಾರಿ ಬಿ.ಶ್ರೀರಾಮುಲು ಅವರಿಗೆ ಕೊಡಲಾಗಿದೆ.
ಖಾತೆಗಳ ಹಂಚಿಕೆಯಲ್ಲಿ ಸಂಘ ಪರಿವಾರ, ಯಡಿಯೂರಪ್ಪ, ವಲಸಿಗರು, ವರಿಷ್ಠರು ಸೇರಿ ಎಲ್ಲ ಅಂಶಗಳನ್ನು ಬ್ಯಾಲೆನ್ಸ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು ಜಾಣ ನಡೆ ಅನುಸರಿಸಿದ್ದಾರೆ.
ಯಾರಿಗೆ ಯಾವ ಖಾತೆ?
- ಬಸವರಾಜ ಬೊಮ್ಮಾಯಿ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಯಾರಿಗೂ ಹಂಚದಿರುವ ಎಲ್ಲ ಖಾತೆಗಳು
- ಗೋವಿಂದ ಕಾರಜೋಳ: ಜಲ ಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
- ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಆರ್.ಅಶೋಕ್: ಕಂದಾಯ
- ಬಿ.ಶ್ರೀರಾಮುಲು: ಸಾರಿಗೆ
- ವಿ.ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ
- ಉಮೇಶ ಕತ್ತಿ: ಅರಣ್ಯ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ
- ಎಸ್.ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
- ಜೆ.ಸಿ.ಮಾಧುಸ್ವಾಮಿ: ಸಣ್ಣ ನೀರಾವರಿ ಮತ್ತು ಕಾನೂನು-ಸಂಸದೀಯ ವ್ಯವಹಾರ
- ಅರಗ ಜ್ಞಾನೇಂದ್ರ: ಗೃಹ
- ಡಾ.ಸಿ.ಎನ್.ಅಶ್ವತ್ಥನಾರಾಯಣ: ಉನ್ನತ ಶೀಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ
- ಸಿ.ಸಿ.ಪಾಟೀಲ್: ಲೋಕೋಪಯೋಗಿ
- ಆನಂದ್ ಸಿಂಗ್: ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ
- ಕೋಟಾ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ
- ಪ್ರಭು ಚೌಹಾಣ್: ಪಶು ಸಂಗೋಪನೆ
- ಮುರುಗೇಶ್ ನಿರಾಣಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಶಿವರಾಮ್ ಹೆಬ್ಬಾರ್: ಕಾರ್ಮಿಕ
- ಎಸ್.ಟಿ.ಸೋಮಶೇಖರ್: ಸಹಕಾರ
- ಬಿ.ಸಿ.ಪಾಟೀಲ್: ಕೃಷಿ
- ಭೈರತಿ ಬಸವರಾಜ್: ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)
- ಡಾ.ಕೆ.ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
- ಕೆ.ಗೋಪಾಲಯ್ಯ: ಅಬಕಾರಿ
- ಶಶಿಕಲಾ ಜೊಲ್ಲೆ: ಮುಜಾರಾಯಿ, ಹಜ್-ವಕ್ಫ್
- ಎಂಟಿಬಿ ನಾಗರಾಜು: ಪೌರಾಡಳಿತ ಮತ್ತು ಸಣ್ಣ-ಸಾರ್ವಜನಿಕ ವಲಯದ ಕೈಗಾರಿಕೆ
- ಡಾ.ಕೆ.ಸಿ.ನಾರಾಯಣ ಗೌಡ: ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡೆ
- ಬಿ.ಸಿ.ನಾಗೇಶ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ & ಸಕಾಲ
- ವಿ.ಸುನೀಲ್ ಕುಮಾರ್: ಇಂಧನ & ಕನ್ನಡ-ಸಂಸ್ಕೃತಿ
- ಹಾಲಪ್ಪ ಆಚಾರ್: ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ
- ಶಂಕರ ಪಾಟೀಲ್ ಮುನೇನಕೊಪ್ಪ: ಜವಳಿ,
- ಮುನಿರತ್ನ: ತೋಟಗಾರಿಕೆ, ಯೋಜನೆ & ಸಾಂಖಿಕ

