ಬಿಜೆಪಿ ಸರ್ಕಾರ ರೈತರ ಕಲ್ಯಾಣಕ್ಕೆ ಇದೆ -ಸಚಿವೆ ಶೋಭಾ ಕರಂದ್ಲಾಜೆ

ಮೈಸೂರು: ಬಿಜೆಪಿ ಸರ್ಕಾರ ರೈತರ ಕಲ್ಯಾಣಕ್ಕೆ ಇದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮೈಸೂರಿನ ಬಿಜೆಪಿ ಕಛೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಆಹಾರ ಉತ್ಪಾದನೆಯಲ್ಲೂ ಭಾರತ ದಾಖಲೆ ಮಾಡಿದೆ. ಕೋವಿಡ್ ನಡುವೆಯು ಈ ಸಾಧನೆ ಮಾಡಿದೆ. ಸಮಸ್ಯೆ ನಡುವೆಯು ರೈತರು ಉತ್ತಮ ಕೃಷಿ ಮಾಡಿದ್ದಾರೆ. ಸಣ್ಣ ರೈತರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಕೃಷಿಗೆ ಕಾಂಗ್ರೆಸ್ ಎಷ್ಟು ಹಣ ಕೊಟ್ಟಿದೆ, ಬಿಜೆಪಿ ಎಷ್ಟು ಹಣ ನೀಡಿದೆ ಎಂಬ ಮಾಹಿತಿ ಗೂಗಲ್ ನಲ್ಲೇ ಸಿಗಲಿದೆ. ಕಾಂಗ್ರೆಸ್ ಕೃಷಿಗಾಗಿ ಮೀಸಲಿಟ್ಟಿದ್ದು ಕೇವಲ 27 ಸಾವಿರ ಕೋಟಿ. ಆದರೆ ಬಿಜೆಪಿ 1 ಲಕ್ಷದ 23 ಸಾವಿರ ಕೋಟಿ ಕೃಷಿಗಾಗಿ ಮೀಸಲಿಟ್ಟಿದೆ ಎಂದು ಅವರು ವಿವರಿಸಿದರು.

ನಾನು ಕೂಡ ರೈತನ ಮಗಳು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕುಗ್ರಾಮದಿಂದ ಬಂದಿರುವ ನನ್ನನ್ನು ಕೃಷಿ ಮಂತ್ರಿಯನ್ನಾಗಿ ಮಾಡಿದ್ದಾರೆ. ಕೃಷಿ ಇಲಾಖೆಯನ್ನು ಅಧ್ಯಯನ ಮಾಡಲು ಮೂರು ತಿಂಗಳ ಅವಶ್ಯಕತೆ ಇದೆ. ಈ ಮೊದಲಿನ ಸರ್ಕಾರಗಳು ಕೃಷಿಯನ್ನು ಕಡೆಗಣಿಸಿದ್ದವು. ಆದರೆ ಮೋದಿಯವರು ಪ್ರಧಾನಿಯಾದ ಬಳಿಕ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ರಫ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾವು ಪ್ರಗತಿ ಸಾಗುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಖಾದ್ಯ ತೈಲದ ಕೊರತೆ ಹೆಚ್ಚಾಗಿದೆ. ಶೇಕಡ 70%ರಷ್ಟು ಖಾದ್ಯ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಖಾದ್ಯ ತೈಲ ಉತ್ಪಾದನೆ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಡೈರಿ, ಪೌಲ್ಟ್ರಿ, ಕುಕ್ಕುಟೋದ್ಯಮಕ್ಕೂ ಕೇಂದ್ರ ಸರ್ಕಾರ ಉತ್ತೇಜನ ನೀಡಿದೆ ಎಂದು ತಿಳಿಸಿದರು.

ದೇಶದಾದ್ಯಂತ ಹೊಸ ಮಂತ್ರಿಗಳ ಜನಾಶೀರ್ವಾದ ಯಾತ್ರೆ ನಿನ್ನೆಯಿಂದ ನಡೆಯುತ್ತಿದೆ. ಹೊಸ ಮಂತ್ರಿಗಳನ್ನು ಪ್ರಧಾನಿಗಳು ಲೋಕಸಭೆ, ರಾಜ್ಯಸಭೆಗೆ ಪರಿಚಯ ಮಾಡುವುದು ವಾಡಿಕೆ. ಇದಕ್ಕೆ ವಿರೋಧ ಪಕ್ಷಗಳು, ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ. ಇದಕ್ಕಾಗಿ ದೇಶಕ್ಕೆ ನಮ್ಮನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಇಡೀ ದೇಶದಲ್ಲಿ ಜನಾಶಿರ್ವಾದ ಯಾತ್ರೆ ನಡೆಯುತ್ತಿದೆ. ಆವತ್ತು ನಮ್ಮ ಪರಿಚಯ ಆಗಿದ್ದರೆ ಅಲ್ಲಿದ್ದ 350 ಜನರಿಗೆ ಪರಿಚಯ ಆಗುತಿತ್ತು. ಆದರೆ ಈಗ 130 ಕೋಟಿ ಜನರಿಗೆ ಪರಿಚಯ ಆಗುವಂತಾಗಿದೆ ಎಂದರು.

ವಿರೋಧ ಪಕ್ಷಗಳ ದುರ್ನಡತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ವಿರೋಧ ಪಕ್ಷಗಳು ಸದನ ನಡೆಯಲು ಬಿಡದೆ ತೀರಾ ಕೆಟ್ಟದಾಗಿ ನಡೆದುಕೊಂಡಿವೆ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಖಂಡರುಗಳಾದ ರವಿಶಂಕರ್, ಮೋಹನ್, ರಾಜೇಂದ್ರ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.