ನವದೆಹಲಿ: ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ರಾಜ್ಯ ಬಿಜೆಪಿ ಪಾಳೆಯದಲ್ಲಿ ಸುದ್ದಿ ಹರಿದಾಡುತ್ತಿದೆ.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಗೆ ಅರುಣ್ ಸಿಂಗ್ ಅವರು ಭೇಟಿ ನೀಡಿ, ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಅವರ ದಿಢೀರ್ ಸಕ್ರಿಯತೆ ಬಗ್ಗೆ ಎಲ್ಲರಿಗೂ ಅಚ್ಚರಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಅರುಣ್ ಸಿಂಗ್ ಗುರುವಾರ ಬೆಳಗ್ಗೆ ಬೆಂಗಳೂರಲ್ಲಿ ಭೇಟಿಯಾಗಿ ಉಪಾಹಾರ ಸೇವಿಸಿ ಬಹಳ ಹೊತ್ತು ಮಾತುಕತೆ ನಡೆಸಿದ್ದಾರೆಂದು ಗೊತ್ತಾಗಿದೆ.
ಇದಕ್ಕೂ ಮುನ್ನ ಅರುಣ್ ಸಿಂಗ್ ರಾಜ್ಯದ ಬಿಜೆಪಿಯ ವಿವಿಧ ನಾಯಕರನ್ನು ಅವರು ಭೇಟಿಯಾಗಿದ್ದಾರೆ.
ಈ ಹಿಂದೆಯೇ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಡಿಯೂರಪ್ಪ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ನಾಯಕರ ವಿರೋಧ ಕಟ್ಟಿಕೊಂಡಿದ್ದ ಅರುಣ್ ಸಿಂಗ್ ವಿರುದ್ಧ ಅನೇಕ ದೂರುಗಳು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೂ ಹೋಗಿದ್ದವು ಎನ್ನಲಾಗಿದೆ.
ಇನ್ನೊಂದೆಡೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆಯೂ ಸಿಂಗ್ ವರಸೆ ಬದಲಾಗಿಲ್ಲ. ಸಮಯ ಸಿಕ್ಕಾಗಲೆಲ್ಲ ಅವರು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಪಕ್ಷದ ಹಿರಿಯರಿಗೆ ಇಷ್ಟವಾಗುತ್ತಿಲ್ಲವಂತೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಅರುಣ್ ಸಿಂಗ್ ಒಂದೇ ಕಡೆ ವಾಲಿದ್ದರು. ನಮ್ಮ ಅಭಿಪ್ರಾಯಕ್ಕೆ ಕಿಮ್ಮತ್ತು ಕೊಡುತ್ತಿರಲಿಲ್ಲ. ಹೀಗಾಗಿ ಅವರನ್ನು ರಾಜ್ಯ ಪ್ರಭಾರಿ ಹೊಣೆಯಿಂದ ಬದಲಾಯಿಸಬೇಕು ಎಂದು ಯತ್ನಾಳ್ ಬಹಿರಂಗವಾಗಿಯೇ ಒತ್ತಾಯ ಮಾಡಿದ್ದರು.
ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಸಿಂಗ್ ಕಳೆದ ಜುಲೈನಲ್ಲಿ ಬಿಜೆಪಿ ಶಾಸಕರ ಜತೆ ನಡೆಸಿದ ಚರ್ಚೆಯ ವೇಳೆ ಯತ್ನಾಳ್ ಭೇಟಿಗೆ ನಿಗದಿಯಾಗಿದ್ದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿ ಸೇಡು ತೀರಿಸಿಕೊಂಡಿದ್ದಾರೆನ್ನಲಾಗಿದೆ.
ಅರುಣ್ ಸಿಂಗ್ ಈ ನಡೆಯ ಬಗ್ಗೆ ಯತ್ನಾಳ್ ಕೂಡ ಟೀಕಿಸಿ, ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದವರೂ ಕೂಡ ಸಿಂಗ್ ನಡೆಯಲ್ಲಿ ತಪ್ಪು ಹುಡುಕಿ ಕಟುವಾಗಿ ಟೀಕೆ ಮಾಡಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಸಿಂಗ್ ವಿರುದ್ಧವೇ ಅತೃಪ್ತಿ ಹೊಗೆಯಾಡುತ್ತಿದೆ. ರಾಜಿ ಮಾಡಿಸಲೆಂದು ರಾಜ್ಯಕ್ಕೆ ಬಂದು ರಾಜಾಹುಲಿ ಪರ ನಿಂತ ಸಿಂಗ್ ಗೆ ಪಾಠ ಕಲಿಸಬೇಕೆಂದು ಹಳೆಯ ರೆಬೆಲ್‍ಗಳು ಈಗ ಮುಂದಾಗಿದ್ದಾರೆನ್ನಲಾಗಿದೆ.
ಹೇಳಿಕೇಳಿ ಅರುಣ್ ಸಿಂಗ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಂಬಂಧಿ. ಈ ಕಾರಣಕ್ಕೆ ದಿಲ್ಲಿಗೆ ಹೋಗುವ ಪ್ರತಿಯೊಬ್ಬ ರಾಜ್ಯ ನಾಯಕ, ಮುಖಂಡನೂ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಅರುಣ್ ಸೀಂಗ್ ಮೇಲೆ ಪ್ರಭಾವ ಬೀರಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪ.
ಈ ವಿಷಯ ದಿಲ್ಲಿ ವರಿಷ್ಠರಿಗೂ ಗೊತ್ತಿಲ್ಲದ ವಿಚಾರವೇನಲ್ಲ.
ರಾಜ್ಯದಲ್ಲಿ, ಅತ್ತ ದಿಲ್ಲಿಯಲ್ಲಿ ಬೇರೆ ಬೇರೆ ಪವರ್ ಸೆಂಟರ್ ಗಳು ಸೃಷ್ಟಿಯಾಗುವುದು ಹೈಕಮಾಂಡ್ ಗೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಜಾಗಕ್ಕೆ ಬೇರೊಬ್ಬರನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅರುಣ್ ಸಿಂಗ್ ಜಾಗಕ್ಕೆ ಯಾರು?
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಹಿಂದೆಯೂ ರಾಜ್ಯ ಉಸ್ತುವಾರಿ ಆಗಿದ್ದ ಪ್ರಧಾನ್ ಅವರು, ರಾಜ್ಯ ಬಿಜೆಪಿ ಎಲ್ಲ ಆಗು ಹೋಗುಗಳನ್ನು ಬಲ್ಲವರು. ಇವರ ಜತೆಗೆ, ತೆಲಂಗಾಣದ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೆಸರೂ ಹೈಕಮಾಂಡ್ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.
ತಮ್ಮ ವಿರುದ್ಧ ಕರ್ನಾಟಕದಲ್ಲೇ ದಾಳ ಉರುಳುತ್ತಿದೆ ಎಂದು ಗೊತ್ತಾದ ಕೂಡಲೇ ಅರುಣ್ ಸಿಂಗ್ ರಾಜ್ಯಕ್ಕೆ ಧಾವಿಸಿ ಬಂದಿದ್ದಾರೆ ಎಂದು ಕೆಲ ಬಿಜೆಪಿಗರು ಮಾತನಾಡಿಕೊಳ್ಳುತ್ತಿದ್ದಾರೆ.

