ಧರ್ಮ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ -ಆರ್. ಧ್ರುವನಾರಾಯಣ್

ಮೈಸೂರು: ಧರ್ಮದ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕಲ್ಪನೆ ಆಧಾರಿತ ವಿದ್ಯೆ ಕಲಿಸಲು ಮುಂದಾಗುತ್ತಿದ್ದಾರೆ. ಕಸ್ತೂರಿ ರಂಗನ್ ಸಮಿತಿಯ ಬಹುತೇಕರು ಆರ್ ಎಸ್‍ಎಸ್ ನವರು. ಭಾರತದ ವಿವಿಧತೆಗೆ ಧ್ವನಿಯಾಗ ಬಲ್ಲ ಸದಸ್ಯರ ನೇಮಕ ಆಗಿಲ್ಲವೆಂದರು.

ನೂತನ ಶಿಕ್ಷಣ ನೀತಿಯಲ್ಲಿ ಬಹುತ್ವದ ಚಿಂತನೆಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಸ್‍ಎಸ್‍ಎಲ್ ಸಿ ಪರೀಕ್ಷೆ ಕೈಬಿಡಲಾಗಿದೆ. ಬದಲಿಗೆ 12ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನ ಕುಲಕಸುಬುಗಳಿಗೆ ಮರಳಿಸುವ ಷಡ್ಯಂತ್ರ. ಪ್ರಾಚೀನ ಸಂಸ್ಕೃತಿಗೆ, ಸಂಸ್ಕೃತ ಭಾಷೆ ಕಲಿಕೆಗೆ ಅನಗತ್ಯವಾಗಿ ಒತ್ತು ನೀಡಲಾಗುತ್ತಿದೆ ಎಂದು ಆರ್. ಧ್ರುವನಾರಾಯಣ್ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕ. ಹಿಮ್ಮುಖ ಚಲನೆ ಆಗುವಂತ ರಾಷ್ಟ್ರೀಯ ನೀತಿ ಇದಾಗಿದೆ ಎಂದರು.

ಇಂದಿಗಾಂಧಿಯವರು 1968ರಲ್ಲಿ, ರಾಜೀವ್ ಗಾಂಧಿಯವರು 1986 ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರು. ಆಗ ಬಹಳಷ್ಟು ಚರ್ಚೆಗಳಾಗಿತ್ತು. ಪ್ರಮುಖರ ಅಭಿಪ್ರಾಯಗಳನ್ನ ಸಂಗ್ರಹಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿತ್ತು. ಆದರೆ ಈಗ ಯಾವುದೇ ಚರ್ಚೆಯಾಗದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದವರು ದೂರಿದರು.

ಶಿಕ್ಷಣ ನೀತಿಯ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಚರ್ಚೆ ಮಾಡಬೇಕು. ಕೇಂದ್ರ ಬಜೆಟ್ ನಲ್ಲಿ 6% ಹಣವನ್ನ ರಾಷ್ಟ್ರೀಯ ಶಿಕ್ಷಣ ನೀತಿ ಮೀಸಲಿಡಬೇಕು. ಶಾಲೆಗಳ ಅಭಿವೃದ್ಧಿಯೂ ಆಗಿಲ್ಲ. ಶಿಕ್ಷಕರ ನೇಮಕವಾಗಿಲ್ಲ, ಶಿಕ್ಷಕರ ಸಮಸ್ಯೆ ಸರಿಪಡಿಸಿಲ್ಲ. ಇದ್ಯಾವುದನ್ನು ಮಾಡದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಧ್ರುವನಾರಾಯಣ್ ಹೇಳಿದರು.