ಹಳಿ ತಪ್ಪಿದ ರೈಲು: ಅಣಕು ಕಾರ್ಯಾಚರಣೆ

ಮೈಸೂರು: ಮೈಸೂರು ವಿಭಾಗೀಯ ರೈಲ್ವೆ ವತಿಯಿಂದ ಮಂಗಳವಾರ ನಗರದ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಎನ್ ಡಿ ಆರ್ ಡಿ ಎಫ್ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಆಕಸ್ಮಿಕ ಘಟನೆಗಳು/ಅವಘಡಗಳು ಸಂಭವಿಸಿದಾಗ ಮಾನವರ ಜೀವಗಳನು ಸಂರಕ್ಷಿಸುವುದೇ ಸದರಿ ಅಣಕು ಕವಾಯತು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ.

ಇದರೊಂದಿಗೆ ನೈಸರ್ಗಿಕ ಅವಘಡಗಳು ಎದುರಿಸುವ ಬಗ್ಗೆ ಇದು ಒಂದು ರೀತಿಯ ತಯಾರಿಯಾಗಿದೆ. ಆರ್ಥಿಕ ಹಾಗೂ ಪರಿಸರ ಹಾನಿಯನ್ನು ತಡೆಗಟ್ಟುವ ಸದುದ್ದೇಶವನ್ನೂ ಸಹ ಹೊಂದಿದೆ.

ಈ ರೀತಿಯಾಗಿ ನಮ್ಮ ಸಿಬ್ಬಂದಿಗಳಿಗೆ ಪೂರ್ವಭಾವಿ ತರಬೇತಿಯನ್ನು ನೀಡಿದರೆ ಅಪಘಾತಗಳು/ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಮಾನವ ಜೀವ ರಕ್ಷಣೆಯನ್ನು ವ್ಯವಸ್ಥಿತವಾಗಿ ಮಾಡಬಹುದಾಗಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

ಈ ರೀತಿಯ ಅಣುಕು ವ್ಯಾಯಾಮ ಪ್ರದರ್ಶನಗಳು ಅಪಘಾತಗಳು ಸಂಭವಿಸಿದಾಗ ಹೇಗೆ ರೈಲ್ವೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.

ಈ ಸಂಬಂಧ ರೈಲು ಗಾಡಿ ಸಂ. 06220 ತಿರುಪತಿ-ಚಾಮರಾಜನಗರ ಎಕ್ಸ್ ಪ್ರೆಸ್ನ ಎರಡು ಸಾಮಾನ್ಯ ದ್ವಿತೀಯ ದರ್ಜೆ ಪ್ರಯಾಣಿಕರ ಬೋಗಿಗಳಾದ SWಖ 91604 ಮತ್ತು SWಖ 92665 ಬುಧವಾರ ಬೆಳಗ್ಗೆ 9.56 ಗಂಟೆ ಸುಮಾರಿಗೆ ಅಶೋಕಪುರಂ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಹಳಿ ತಪ್ಪಿ ಉರುಳಿವೆ ಎಂಬ ಸಂದೇಶವನ್ನು ಸಂಬಂಧಿಸಿದವರಿಗೆ ರವಾನಿಸಲಾಯಿತು.

ಘಟನೆಯ ಸಂದೇಶವನ್ನು ಸ್ವೀಕರಿಸಿದ ತಕ್ಷಣ ರೈಲ್ವೆ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಧಾವಿಸಿ ಪೂರ್ವನಿರ್ಧಾರಿತ ಪ್ರೋಟೋಕಾಲ್ಗಳ ಪ್ರಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದರು. ಹಾಗೆಯೇ ಸರಿಯಾದ ಸಂದರ್ಭದಲ್ಲಿ ರಕ್ಷಣೆ ನೀಡಲು ಸಂಪೂರ್ಣವಾದ ತರಬೇತಿಯನ್ನು ನೀಡಲಾಗಿದೆ ಎಂಬ ಭರವಸೆಯನ್ನು ಮೂಡಿಸುವ ಪ್ರಯತ್ನ ಇದಾಗಿದೆ.

ಇಪ್ಪತ್ತು ಸಿಬ್ಬಂದಿಯನ್ನು ಒಳಗೊಂಡ ಎನ್ ಡಿ ಆರ್ ಎಫ್ ತಂಡವು ಸೂಚನೆ ನೀಡಿದ 20 ನಿಮಿಷಗಳಲ್ಲಿ ಸ್ಥಳವನ್ನು ತಲುಪಿತು. ಎರಡು ಕೋಚ್ಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 15 ಪ್ರಯಾಣಿಕರನ್ನು ಹೊರತೆಗೆಯಲು ಸಹಾಯ ಮಾಡಲು ಮತ್ತು ಪ್ರಥಮ ಚಿಕಿತ್ಸೆ ಕೊಡಲು ಅಗ್ನಿಶಾಮಕ ದಳದ ಸಿಬ್ಬಂದಿ, ರೈಲ್ವೆ ಆಸ್ಪತ್ರೆಯ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಆಂಬುಲೆನ್ಸ್ಗಳೊಂದಿಗೆ ತಲುಪಿದರು ಮತ್ತು ರಕ್ಷಣಾ ಕಾರ್ಯಾಚರಣೆಗಿಳಿದರು.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮತ್ತು ಇತರ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಯಿತು.

ಈ ಅಣಕು ಪ್ರದರ್ಶನ ಸುಮಾರು 70 ನಿಮಿಷಗಳ ಕಾಲ ನಡೆದು 11.40ಕ್ಕೆ ಪೂರ್ಣಗೊಂಡಿತು.

ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರವರು ಮಾತನಾಡಿ, ಆಗಿಂದಾಗ್ಗೆ ಈ ರೀತಿಯಾದ ಅಣಕು ವ್ಯಾಯಾಮಗಳನ್ನು ಏರ್ಪಡಿಸುವ ಮೂಲಕ ರೇಲ್ವೆ ಸಿಬ್ಬಂದಿಗಳು ನೈಸರ್ಗಿಕ ಅವಘಡಗಳು ಅಥವಾ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತೋರಿಸುವ ಪ್ರಯತ್ನ ಇದಾಗಿದೆ ಎಂದರು.

ಜನರ ಜೀವವನ್ನು ರಕ್ಷಿಸುವ ಮತ್ತು ಕಾಪಾಡುವ ಮುಖ್ಯ ಉದ್ದೇಶ ರೇಲ್ವೆ ಇಲಾಖೆ ಹೊಂದಿದೆ ಎಂದು ಅವರು ತಿಳಿಸಿದರು. ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿಗಳು ಯಾವೆಲ್ಲಾ ಸಾಧನಗಳನ್ನು ಸಿದ್ಧಪಡಿಸಿಕೊಂಡಿರುತ್ತಾರೆ ಮತ್ತು ಹೇಗೆ ಅವುಗಳ ಬಳಕೆಯನ್ನು ಮಾಡಿಕೊಳ್ಳುತ್ತಾರೆ ಎಂಬುದನ್ನೂ ಸಹ ಈ ಮೂಲಕ ಜನರಿಗೆ ತಿಳಿಸುವ ಒಂದು ಪ್ರಯತ್ನವಾಗಿದೆ ಎಂದು ಹೇಳಿದರು.

ಇಂಥ ಸಂದರ್ಭಗಳು ಬಂದಾಗ ಮೈಸೂರಿನ ವಿಭಾಗೀಯ ರೇಲ್ವೆಯು ಇಂತಹ ಅವಘಡಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದರು.

ಅಲ್ಲದೆ ಶೀಘ್ರ ಅಪಘಾತದ ಸ್ಥಳ ತುಲುಪುವಂತೆ ಸ್ವಯಂಚಾಲಿತ ರೈಲುಗಳನ್ನು ಸನ್ನದ್ದ ಸ್ಥಿತಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಇರಿಸಲಾಗಿದ್ದು, ಹೊಸ ತಂತ್ರಜ್ಞಾನ ಹಾಗೂ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ನಾಗರೀಕ ಸಂಸ್ಥೆಗಳ ಸಹಕಾರದೊಂದಿಗೆ ವಿಭಾಗವು ಎಂಥ ಕಠಿಣವಾದ ಅವಘಡಗಳು ಸಂಭವಿಸಿದರೂ ಎದುರಿಸಲು ಎಲ್ಲ ರೀತಿಯಲ್ಲು ಸನ್ನದ್ದ ವಾಗಿದೆ ಎಂದು ತಿಳಿಸಿದರು.

ಈ ಅಣಕು ವ್ಯಾಯಾಮ ಪ್ರದರ್ಶನದಲ್ಲಿ ವೈದ್ಯಕೀಯ ಇಲಾಖೆ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಗಳು ಹಾಗೂ ರೈಲ್ವೆ ಪೊಲೀಸ್, ನಾಗರಿಕ ಸೇವಾ ಅಧಿಕಾರಿಗಳು ಹಾಗೂ ರೇಲ್ವೆ ಇಲಾಖೆ ಎಲ್ಲ ಸಿಬ್ಬಂದಿಗಳು ಭಾಗವಹಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.